ಬೆಂಗಳೂರು: ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ನೀಡುವ ಉದ್ದೇಶದಿಂದ ನಿಗಮ ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ಮುಂದುವರಿದಿದ್ದು, ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ ಪ್ರಕಟವಾಗಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ಹಂತದ ನೇಮಕಾತಿ ಪಟ್ಟಿ ಪ್ರಕಟಿಸಲಾಗಿದೆ. ಎರಡನೇ ಪಟ್ಟಿ ಬಿಡುಗಡೆಯಾದ ಬಳಿಕ ಉಳಿದ ಸ್ಥಾನಗಳಿಗೂ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
ಪಕ್ಷ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಭಾರತ ಜೋಡೋ ಯುವ ಸಂಘಗಳಿಗೆ ಸದಸ್ಯತ್ವ ಅಭಿಯಾನ ನಡೆಸಬೇಕು ಎಂದು ಸೂಚಿಸಿದರು. ಗ್ಯಾರಂಟಿ ಸಮಿತಿಗೆ ಈಗಾಗಲೇ 40 ಸಾವಿರ ಜನರನ್ನು ನೇಮಕ ಮಾಡಲಾಗಿದ್ದು, ಇನ್ನೂ 20 ಸಾವಿರ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಭೂಮಿ ಗ್ಯಾರಂಟಿಯೂ ಪ್ರಮುಖವಾಗಿದ್ದು, ದೇಶದ ಇತರ ರಾಜ್ಯಗಳು ನಮ್ಮ ಯೋಜನೆಗಳನ್ನು ಗಮನಿಸುತ್ತಿವೆ ಎಂದರು.
ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ ಅರ್ಹ ಮತದಾರರ ಹೆಸರುಗಳನ್ನು ಮರು ಸೇರ್ಪಡೆಗೊಳಿಸಲು ಪಕ್ಷದ ವತಿಯಿಂದ ವಿಶೇಷ ಆ್ಯಪ್ ಸಿದ್ಧಪಡಿಸಲಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಅರ್ಹ ಮತದಾರರಿಗೆ ನೆರವಾಗಬೇಕು ಎಂದು ತಿಳಿಸಿದರು.
ನೆಹರು ಅವರ ಕೊಡುಗೆ ಅಪಾರ
ದೇಶದ ಕೈಗಾರಿಕಾ, ಹಸಿರು ಹಾಗೂ ಕ್ಷೀರ ಕ್ರಾಂತಿಗೆ ಅಡಿಪಾಯ ಹಾಕಿದವರು ನೆಹರು. ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಮಕ್ಕಳ ಶಿಕ್ಷಣವೇ ದೇಶದ ಭವಿಷ್ಯಕ್ಕೆ ನಿಜವಾದ ಹೂಡಿಕೆ ಎಂದು ಪ್ರತಿಪಾದಿಸಿದ್ದ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಶಿವಕುಮಾರ್ ಹೇಳಿದರು.
ವಿಧಾನಸೌಧಕ್ಕೆ ಶಂಕುಸ್ಥಾಪನೆ ಮಾಡಿದವರು ನೆಹರು. ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೇಂದ್ರದ ಕಾನೂನು ಸಚಿವರನ್ನಾಗಿ ನೇಮಿಸುವ ಮೂಲಕ ಮಹತ್ವದ ಜವಾಬ್ದಾರಿ ನೀಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೊಂದಿಗೆ 550ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದ ಏಕತೆಗೆ ಬುನಾದಿ ಹಾಕಿದರು ಎಂದು ಸ್ಮರಿಸಿದರು.
ನೆಹರು ಅವರ ಪಂಚವಾರ್ಷಿಕ ಯೋಜನೆಗಳು, ಎಚ್‌ಎಂಟಿ, ಐಟಿಐ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳು ಮತ್ತು ಕೈಗಾರಿಕಾ ಬೆಳವಣಿಗೆಗೆ ನೀಡಿದ ಪ್ರೋತ್ಸಾಹ ಕರ್ನಾಟಕದ ಅಭಿವೃದ್ಧಿಗೂ ನೆರವಾಗಿದೆ. ತುಂಗಭದ್ರಾ ಅಣೆಕಟ್ಟು ನಿರ್ಮಾಣಕ್ಕೂ ಅವರ ಕೊಡುಗೆ ಇದೆ. ಅವರ ದೂರದೃಷ್ಟಿ ಆಧುನಿಕ ಭಾರತದ ನಿರ್ಮಾಣಕ್ಕೆ ಮಹತ್ವದ ಅಡಿಪಾಯವಾಗಿದೆ ಎಂದರು.
ನೆಹರು ಅವರು ಮಕ್ಕಳನ್ನು ದೇಶದ ಸಂಪತ್ತು ಎಂದು ಪರಿಗಣಿಸಿದ್ದರು. ಮಕ್ಕಳ ಕನಸುಗಳೇ ದೇಶದ ಭವಿಷ್ಯ ಎಂದು ನಂಬಿದ್ದರು. ಪ್ರತಿ ಮನೆಯಲ್ಲೂ ಮಕ್ಕಳ ಶಿಕ್ಷಣ ಮತ್ತು ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಅವರ ಚಿಂತನೆ, ತತ್ವ ಮತ್ತು ಸಿದ್ಧಾಂತಗಳು ಇಂದಿಗೂ ನಮಗೆ ದಾರಿದೀಪವಾಗಿವೆ ಎಂದು ಹೇಳಿದರು.
ರಾಜಕೀಯದಲ್ಲಿ ಬೆಳೆಯಲು ಶಾಸಕರಾಗಿಯೇ ಆರಂಭಿಸಬೇಕೆಂದಿಲ್ಲ. ಸ್ಥಳೀಯ ಸಂಸ್ಥೆಗಳ ಮೂಲಕವೂ ನಾಯಕತ್ವ ಬೆಳೆಸಿಕೊಳ್ಳಬಹುದು. ನೆಹರು, ಕೆಂಗಲ್ ಹನುಮಂತಯ್ಯ, ರಾಜಗೋಪಾಲಾಚಾರಿ ಮತ್ತು ಬಿ.ಡಿ. ಜತ್ತಿ ಸೇರಿದಂತೆ ಹಲವು ನಾಯಕರು ಸ್ಥಳೀಯ ಸಂಸ್ಥೆಗಳಿಂದ ಉನ್ನತ ಸ್ಥಾನಕ್ಕೇರಿದ್ದಾರೆ. ಕಾರ್ಯಕರ್ತರು ಜನಸೇವೆಯ ಮೂಲಕ ರಾಜಕೀಯದಲ್ಲಿ ಬೆಳೆಯಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ವಿಧಾನಸೌಧದ ಆವರಣದಲ್ಲಿ ಮಾತನಾಡಿದ ಅವರು, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವಿದ್ಯುತ್ ಉತ್ಪಾದನೆ, ನೀರಾವರಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ನೆಹರು ರೂಪಿಸಿದ ಯೋಜನೆಗಳು ಇಂದಿಗೂ ದೇಶದ ಪ್ರಗತಿಗೆ ನೆರವಾಗುತ್ತಿವೆ. ಅವರ ದೂರದೃಷ್ಟಿ ಮತ್ತು ಕೊಡುಗೆಗಳನ್ನು ದೇಶ ಸದಾ ಸ್ಮರಿಸಬೇಕು ಎಂದು ತಿಳಿಸಿದರು.
