ಬೆಂಗಳೂರು: ಕರ್ನಾಟಕ ಉರ್ದು ಅಕಾಡೆಮಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸುವುದರ ಜತೆಗೆ, ಅಲ್ಪಸಂಖ್ಯಾತ ಧರ್ಮಗಳ ಮುಖಂಡರು ಹಾಗೂ ಶಾಸಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಪುಸ್ತಕ ಬಿಡುಗಡೆ ಹಾಗೂ ‘ಜಷ್ನ್-ಎ-ಉರ್ದು’ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಸೇರಿದಂತೆ ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಸಕರ ಅಭಿಪ್ರಾಯ ಹಾಗೂ ಸಮಸ್ಯೆಗಳನ್ನೂ ಆಲಿಸಲಾಗುವುದು. ಎಲ್ಲ ಸಮುದಾಯಗಳ ಸಮಸ್ಯೆಗಳನ್ನು ತಿಳಿದುಕೊಂಡು, ಸಂವಿಧಾನದ ಚೌಕಟ್ಟಿನಲ್ಲಿ ಪರಿಹಾರ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ವಿವಿಧ ಸಂದರ್ಭಗಳಲ್ಲಿ ಸಮುದಾಯಗಳಿಗೆ ನೀಡಿರುವ ಮಾತುಗಳನ್ನು ಉಳಿಸಿಕೊಳ್ಳಲು ಬದ್ಧರಾಗಿದ್ದೇವೆ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಎಲ್ಲರನ್ನೂ ಗೌರವಿಸಿ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಸಂವಿಧಾನ ನೀಡಿರುವ ಹಕ್ಕು, ಗೌರವ ಮತ್ತು ರಕ್ಷಣೆಯನ್ನು ಪ್ರತಿಯೊಬ್ಬರಿಗೂ ಖಚಿತಪಡಿಸಲಾಗುವುದು ಎಂದರು.
ಅಲ್ಪಸಂಖ್ಯಾತರ ಪರವಾಗಿ ಸರ್ಕಾರದ ಧ್ವನಿ
ಕೆಲವರಿಗೆ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ನಂಬಿಕೆ ಇಲ್ಲದಿರಬಹುದು. ಆದರೆ, ಕೆಲವರ ಅಪನಂಬಿಕೆಯ ಕಾರಣಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡಲು ಹಾಗೂ ಅವರ ಪರವಾಗಿ ಧ್ವನಿಯಾಗಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ರಕ್ಷಣೆ ನೀಡಲಾಗುವುದು ಎಂದು ಹೇಳಿದರು.
ನಮ್ಮ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿಯೇ ಆಡಳಿತ ನಡೆಸಲಿದೆ. ರಾಹುಲ್ ಗಾಂಧಿ ಸೇರಿದಂತೆ ನಾವೆಲ್ಲರೂ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡೇ ಪ್ರಮಾಣವಚನ ಸ್ವೀಕರಿಸಿದ್ದೇವೆ. ಸಂವಿಧಾನವನ್ನು ಉಳಿಸುವುದು ಹಾಗೂ ಎಲ್ಲ ಜಾತಿ, ಧರ್ಮಗಳಿಗೂ ಸಮಾನ ಗೌರವ ಮತ್ತು ರಕ್ಷಣೆ ನೀಡುವುದು ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದರು.
ಉರ್ದು ಹೃದಯದ ಭಾಷೆ
ಉರ್ದು ಭಾಷೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಭಾಷೆಯಲ್ಲ. ಅದೊಂದು ಹೃದಯದ ಭಾಷೆ. ಸಾಹಿತ್ಯ, ಕಾವ್ಯ ಮತ್ತು ಶಾಯಿರಿ ಮೂಲಕ ಜನರ ಮನಸ್ಸನ್ನು ಮುಟ್ಟುವ ಶಕ್ತಿ ಉರ್ದು ಭಾಷೆಗಿದೆ. ಈ ಭಾಷೆಗೆ ಯಾವುದೇ ಗಡಿಯಿಲ್ಲ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವ ಕುರಿತು ಸಚಿವರೊಂದಿಗೆ ಚರ್ಚಿಸಲಾಗಿದೆ. ಅಕಾಡೆಮಿಗೆ ಅಗತ್ಯವಿರುವ ಸೌಲಭ್ಯಗಳು ಮತ್ತು ಚಟುವಟಿಕೆಗಳನ್ನು ಪರಿಶೀಲಿಸಿ ನೆರವು ನೀಡಲಾಗುವುದು. ಉರ್ದು ಸಾಹಿತ್ಯದ ಬೆಳವಣಿಗೆಗೆ ಅಕಾಡೆಮಿ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ದಸರಾ ಸಂದರ್ಭದಲ್ಲಿ ಆಯೋಜಿಸಿದ್ದ ಉರ್ದು ಶಾಯಿರಿ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಕುಳಿತು ಕಾವ್ಯವನ್ನು ಆಲಿಸಿದ್ದೆ. ಅಲ್ಲಿ ಮುಸ್ಲಿಮರು ಮಾತ್ರವಲ್ಲದೆ ಜೈನರು, ಬ್ರಾಹ್ಮಣರು, ಕನ್ನಡಿಗರು ಹಾಗೂ ಹಿಂದಿ ಮಾತನಾಡುವವರೂ ಭಾಗವಹಿಸಿದ್ದರು. ಭಾಷೆ ಜನರನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಹೇಳಿದರು.
ಕತ್ತರಿ ಬೇಡ, ಸೂಜಿಯ ಕೆಲಸ ಮಾಡೋಣ
ನಮ್ಮ ಭಾಷೆಗಳು ಬೇರೆ ಬೇರೆಯಾಗಿರಬಹುದು. ಆದರೆ ಮನುಷ್ಯರ ಭಾವನೆಗಳು ಒಂದೇ. ಮಾನವೀಯತೆಯೇ ನಮ್ಮ ಜಾತಿ, ಮಾನವೀಯತೆಯೇ ನಮ್ಮ ಧರ್ಮ. ಕಬ್ಬಿಣದಿಂದ ಕತ್ತರಿ ಮತ್ತು ಸೂಜಿ ಎರಡನ್ನೂ ತಯಾರಿಸಬಹುದು. ನಮಗೆ ಕತ್ತರಿಸುವ ಕೆಲಸ ಬೇಡ, ಸೂಜಿಯಂತೆ ಹೊಲೆದು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಸಮಾಜವನ್ನು ಒಡೆಯುವ ಬದಲು ಬೆಸೆಯುವ ಕಾರ್ಯಕ್ಕೆ ಸರ್ಕಾರ ಮತ್ತು ಪಕ್ಷ ಆದ್ಯತೆ ನೀಡುತ್ತವೆ ಎಂದು ಹೇಳಿದರು.
ಯಾವ ಭಾಷೆಯಲ್ಲಿದ್ದರೂ ಜ್ಞಾನಕ್ಕೆ ಗೌರವ ನೀಡಬೇಕು. ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಯನ್ನು ಅಗೌರವದಿಂದ ಕಾಣಬಾರದು. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ತಾಯಿ ಮತ್ತು ತಾಯ್ನುಡಿಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಿದ 20 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸದ ಸಂಗತಿ. ಪ್ರಶಸ್ತಿ ಪಡೆದ ಎಲ್ಲ ಸಾಧಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
