ಬೆಂಗಳೂರು: ಭೂಮಿ ಅಕ್ರಮ ಮಂಜೂರಾತಿ ಹಾಗೂ ಕೋಮುಲ್ ನೇಮಕಾತಿ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರಿಗೆ ಹೈಕೋರ್ಟ್ನಲ್ಲಿ ಮಹತ್ವದ ಜಯ ದೊರೆತಿದೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಇಸಿಐಆರ್ (ECIR) ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರನ್ನು (PCR) ಹೈಕೋರ್ಟ್ ರದ್ದುಗೊಳಿಸಿದೆ.
ನಂಜೇಗೌಡ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಪ್ರಕಟಿಸಿದೆ. ಇದರಿಂದ ಶಾಸಕರ ವಿರುದ್ಧ ಇಡಿ ಕೈಗೊಂಡಿದ್ದ ತನಿಖಾ ಕ್ರಮಗಳಿಗೆ ಹಿನ್ನಡೆಯಾಗಿದೆ.
ಪ್ರಕರಣದ ಹಿನ್ನೆಲೆ
ಭೂಮಿ ಅಕ್ರಮ ಮಂಜೂರಾತಿ ಆರೋಪದಡಿ ಸ್ಥಳೀಯ ಪೊಲೀಸರು ಶಾಸಕ ನಂಜೇಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಇಡಿ ಇಸಿಐಆರ್ ದಾಖಲಿಸಿ, ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
ಇದರ ಬೆನ್ನಲ್ಲೇ, 2023ರಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದರಲ್ಲಿ ನಂಜೇಗೌಡ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸುವಂತೆ ಕೋರಿ ಇಡಿ ಅಧಿಕಾರಿಗಳು 2024ರ ಸೆಪ್ಟೆಂಬರ್ 11ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಬಿ-ರಿಪೋರ್ಟ್ ಆಧರಿಸಿ ವಾದ
ಇಡಿ ಕ್ರಮಗಳನ್ನು ಪ್ರಶ್ನಿಸಿ ನಂಜೇಗೌಡ ಅವರು 2025ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಪರ ಹಿರಿಯ ವಕೀಲ ಕಿರಣ್ ಜವಳಿ ವಾದ ಮಂಡಿಸಿ, ಭೂ ಅಕ್ರಮಕ್ಕೆ ಸಂಬಂಧಿಸಿದ ಮೂಲ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಿ-ರಿಪೋರ್ಟ್ ಸಲ್ಲಿಸಿದ್ದು, ವಿಚಾರಣಾ ನ್ಯಾಯಾಲಯ ಅದನ್ನು ಅಂಗೀಕರಿಸಿದೆ ಎಂದು ತಿಳಿಸಿದರು.
ಮೂಲ ಪ್ರಕರಣವೇ ಇಲ್ಲದಿರುವಾಗ ಇಡಿ ಖಾಸಗಿ ದೂರು ದಾಖಲಿಸುವ ಅಧಿಕಾರ ಹೊಂದಿಲ್ಲ ಎಂದು ವಾದಿಸಿದರು. ಶಾಸಕರ ಪರವಾಗಿ ವಕೀಲ ಸಿ.ಆರ್. ಮಹೇಂದ್ರ ಗೌಡ ವಕಾಲತ್ತು ವಹಿಸಿದ್ದರು.
ಇಡಿ ಕ್ರಮಗಳಿಗೆ ಹಿನ್ನಡೆ
ಅರ್ಜಿದಾರರ ಪರ ವಕೀಲರ ವಾದವನ್ನು ಪರಿಗಣಿಸಿದ ಹೈಕೋರ್ಟ್, ಇಡಿ ದಾಖಲಿಸಿದ್ದ ಇಸಿಐಆರ್ ಹಾಗೂ ಖಾಸಗಿ ದೂರನ್ನು ರದ್ದುಗೊಳಿಸಿ ಆದೇಶಿಸಿದೆ. ಈ ತೀರ್ಪಿನಿಂದ ಶಾಸಕ ಕೆ.ವೈ. ನಂಜೇಗೌಡ ಅವರಿಗೆ ದೊಡ್ಡ ಕಾನೂನು ಸಮಾಧಾನ ದೊರೆತಿದ್ದು, ಭೂ ಅಕ್ರಮ ಮತ್ತು ಕೋಮುಲ್ ನೇಮಕಾತಿ ಆರೋಪಗಳಿಗೆ ಸಂಬಂಧಿಸಿದಂತೆ ಇಡಿ ಕೈಗೊಂಡಿದ್ದ ಕ್ರಮಗಳಿಗೆ ಮಹತ್ವದ ಹಿನ್ನಡೆಯಾದಂತಾಗಿದೆ.
