ಬೆಂಗಳೂರು: ತಮ್ಮ ವಿದ್ಯಾರ್ಹತೆ ಕುರಿತು ಟೀಕೆ ಮಾಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ತಾವು ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದೇನೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಏನು ಎಂಬುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಆರ್ಟಿಐ ಮೂಲಕವೂ ಈ ಕುರಿತು ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ತಾವು ಗ್ರಾಫಿಕ್ ಡಿಸೈನರ್ ಆಗಿದ್ದು, ಪ್ರಧಾನಿ ಮೋದಿಯವರಿಗಿಂತ ಉತ್ತಮವಾಗಿ ಇಂಗ್ಲಿಷ್ ಮತ್ತು ಹಿಂದಿ ಮಾತನಾಡಬಲ್ಲೆ. ಅಲ್ಲದೆ, ಸಂಸ್ಕೃತವನ್ನೂ ಓದಬಲ್ಲೆ ಎಂದು ತಮ್ಮ ವಿದ್ಯಾರ್ಹತೆಯನ್ನು ಸಮರ್ಥಿಸಿಕೊಂಡರು. ತಾವು ಕಾನ್ವೆಂಟ್ನಲ್ಲಿ ಓದಿಲ್ಲ, ಆದಿಮಠ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಯಾವುದೇ ವಿಷಯದ ಕುರಿತು, ಯಾವುದೇ ಭಾಷೆಯಲ್ಲಿ ಬೇಕಾದರೂ ಎಷ್ಟು ಗಂಟೆಗಳ ಕಾಲವಾದರೂ ಮುಕ್ತ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಜೆಡಿಎಸ್ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ ವಿಧಾನಸಭೆಯಲ್ಲಿ 75 ಸ್ಥಾನಗಳನ್ನು ದಾಟಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು. ಮ್ಯಾಚ್ ಫಿಕ್ಸಿಂಗ್, ಹಣದ ಬಲ ಮತ್ತು ಭಾವನಾತ್ಮಕ ಮಾತುಗಳ ಮೂಲಕ ಅಧಿಕಾರಕ್ಕೆ ಬರುತ್ತಾರೆ ಎಂದು ಆರೋಪಿಸಿದ ಅವರು, ಕುಮಾರಸ್ವಾಮಿ ಗಂಭೀರ ರಾಜಕಾರಣಿಯಲ್ಲ ಎಂದರು.
ಅಧಿಕಾರದಲ್ಲಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡುವ ಅವರು, ಅಧಿಕಾರವಿಲ್ಲದಾಗ ಹಳ್ಳಿಯ ನೆನಪು ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು. ತಮ್ಮ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮಾತುಗಳೆಲ್ಲವೂ ವೈರಲ್ ಆಗುತ್ತವೆ. ಬಿಲ್ಬೋರ್ಡ್ ಹಾಕಿದರೆ ನಾನೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸಾಹುಕಾರ್ ವಿಚಾರದಲ್ಲಿ ಬಿಜೆಪಿಗೆ ಪ್ರಶ್ನೆ
ಸಾಹುಕಾರ್ ವಿಚಾರವಾಗಿ ಬಿಜೆಪಿ ನಾಯಕರು ಮತ್ತು ಕುಮಾರಸ್ವಾಮಿ ಮೌನವಾಗಿರುವುದೇಕೆ ಎಂದು ಖರ್ಗೆ ಪ್ರಶ್ನಿಸಿದರು. ತಮ್ಮ ವಿರುದ್ಧ ಐಟಿ ಮತ್ತು ಇಡಿಗೆ ದೂರು ನೀಡುವಂತೆ ಐಎಎಸ್ ಅಧಿಕಾರಿ ಹಾಗೂ ಮಧ್ಯವರ್ತಿಯ ಮೇಲೆ ಒತ್ತಡ ಹೇರಿದವರು ಯಾರು ಎಂದು ಪ್ರಶ್ನಿಸಿದ ಅವರು, ಏನೇ ಮಾಡಿದರೂ ಸತ್ಯ ಹೊರಬರಲಿದೆ ಎಂದರು.
ಮೋದಿ ಭೇಟಿ ಬಗ್ಗೆ ವ್ಯಂಗ್ಯ
ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿಯ ಕುರಿತು ಮಾತನಾಡಿದ ಖರ್ಗೆ, “ಅವರು ಬರುವುದರಿಂದ ಏನಾಗಬೇಕು? ಬಂದ ಪುಟ್ಟ, ಹೋದ ಪುಟ್ಟ ಅಷ್ಟೇ” ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತುಮಕೂರಿಗೆ ಭೇಟಿ ನೀಡಿದ್ದಾಗ, ರಾಜ್ಯಕ್ಕೆ ಬರಬೇಕಿದ್ದ 18 ಸಾವಿರ ಕೋಟಿ ರೂಪಾಯಿ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಅಂದಿನ ಮುಖ್ಯಮಂತ್ರಿ ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.
