ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ತಮ್ಮ ನಿವಾಸದಲ್ಲಿ ಮೊಬೈಲ್ ಹಸ್ತಾಂತರವಾಗಿದೆ ಎಂಬ ಆರೋಪ ಆಧಾರರಹಿತ ಎಂದು ತಳ್ಳಿಹಾಕಿರುವ ಅವರು, ರಾಜ್ಯ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಆರೋಪಿ ರಿತೇಶ್ ಪಾಂಡೆಯನ್ನು ತಮ್ಮ ನಿವಾಸದಲ್ಲಿ ಬಂಧಿಸಲಾಗಿದೆ ಎಂಬ ರೀತಿಯಲ್ಲಿ ಪೊಲೀಸರು ಹೇಳಿಕೆ ನೀಡುತ್ತಿರುವುದನ್ನು ಪ್ರಶ್ನಿಸಿದರು. ರಿತೇಶ್ ಪಾಂಡೆಯನ್ನು ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆಯೇ ಹೊರತು ತಮ್ಮ ಮನೆಯಲ್ಲಲ್ಲ. ಎಫ್‌ಐಆರ್‌ನಲ್ಲಿ ಆರೋಪಿಯ ವಿಳಾಸ ಏನಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಈ ಪ್ರಕರಣದ ತನಿಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲು ಹಾಗೂ ವಿಡಿಯೋ ಚಿತ್ರೀಕರಣದ ಹಿಂದಿರುವ ಪ್ರಮುಖರನ್ನು ರಕ್ಷಿಸಲು ನಡೆಯುತ್ತಿದೆ ಎಂದು ಆರೋಪಿಸಿದರು. ನಿಷ್ಪಕ್ಷಪಾತ ತನಿಖೆ ನಡೆದರೆ ಯಾವುದೇ ವಿಚಾರಣೆಯನ್ನು ಎದುರಿಸಲು ಸಿದ್ಧ ಎಂದು ಸವಾಲು ಹಾಕಿದರು. ಅಲ್ಲದೆ, ಮೋಹನ್ ಗೌಡ ಅವರ ಮನೆಗೆ ಶೋಧನಾ ವಾರೆಂಟ್‌ನೊಂದಿಗೆ ತೆರಳಿದ ಪೊಲೀಸರು ಅವರ ಕುಟುಂಬದವರೊಂದಿಗೆ ನಡೆದುಕೊಂಡ ರೀತಿಯನ್ನೂ ಖಂಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ‘ಪಿಕ್ಚರ್ ಅಭಿ ಬಾಕಿ ಹೈ’ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಇಂತಹ ಅನೇಕ ಟ್ರೈಲರ್‌ಗಳನ್ನು ನೋಡಿದ್ದೇನೆ ಎಂದರು. 2011ರ ಘಟನೆಯನ್ನು 2023ರಲ್ಲಿ ಚಿತ್ರೀಕರಿಸಿ ಬಿಡುಗಡೆ ಮಾಡಿದವರ ಉದ್ದೇಶವೇನು? ವಿಡಿಯೋದಲ್ಲಿರುವ ಮತ್ತೊಬ್ಬ ವಯಸ್ಸಾದ ವ್ಯಕ್ತಿ ಯಾರು? ಕೇರಳ ಮೂಲದ ಮಹಿಳೆಯನ್ನು ಕರೆತಂದ ವ್ಯಕ್ತಿಯನ್ನು ಏಕೆ ವಿಚಾರಣೆ ನಡೆಸಿಲ್ಲ ಎಂದು ಪ್ರಶ್ನಿಸಿದರು.
ಕೃಪಾ ಆಳ್ವ ಅವರನ್ನು 2015ರಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದ್ದು ಸಿದ್ದರಾಮಯ್ಯ ಸರ್ಕಾರವೇ ಹೊರತು ಜೆಡಿಎಸ್ ಅಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಪ್ರಕರಣದ ಹಿಂದಿನ ಸತ್ಯವನ್ನು ಹೊರತರಬೇಕು ಎಂದು ಒತ್ತಾಯಿಸಿದರು.
