ಬೆಂಗಳೂರು: ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಹೊಸ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ಅಕ್ಟೋಬರ್ 30ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಹೊರಡಿಸಿರುವ ಅಧಿಸೂಚನೆಯಂತೆ, ವಿವಿಧ ಇಲಾಖೆಗಳ ಪ್ರಮುಖ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಸುರಳ್ಕರ್ ವಿಕಾಸ್ ಕಿಶೋರ್ ಅವರನ್ನು ಹಿಂದುಳಿದ ವರ್ಗಗಳ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾಗಿರುವ ಕೆ.ಎ. ದಯಾನಂದ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅಕ್ಟೋಬರ್ 17ರಂದು ಹೊರಡಿಸಿದ್ದ ಹಿಂದಿನ ಆದೇಶಕ್ಕೆ ಭಾಗಶಃ ತಿದ್ದುಪಡಿ ತರಲಾಗಿದೆ.
2013ನೇ ಬ್ಯಾಚ್ನ ಐಎಎಸ್ ಅಧಿಕಾರಿ ವೆಂಕಟ್ ರಾಜ್ ಅವರಿಗೆ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಜವಾಬ್ದಾರಿ ವಹಿಸಲಾಗಿದೆ. ಈವರೆಗೆ ಹೆಚ್ಚುವರಿ ಪ್ರಭಾರ ನಿರ್ವಹಿಸುತ್ತಿದ್ದ ಪಾಟೀಲ್ ಯಲಗೌಡ ಶಿವನಗೌಡ ಅವರಿಂದ ಆ ಜವಾಬ್ದಾರಿಯನ್ನು ಹಿಂಪಡೆಯಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಸಿ.ಟಿ. ಅವರನ್ನು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯೋಜನೆಗೆ ತೆರಳುತ್ತಿರುವ ಡಾ. ರಾಜೇಂದ್ರ ಕೆ.ವಿ. ಅವರ ಸ್ಥಾನಕ್ಕೆ ಶಿಲ್ಪಾ ನಾಗ್ ಅವರನ್ನು ನೇಮಿಸಲಾಗಿದೆ.
ಇದೇ ವೇಳೆ, ಕಲಬುರಗಿ ನಗರ ಪಾಲಿಕೆಯ ಆಯುಕ್ತರಾಗಿದ್ದ 2020ನೇ ಬ್ಯಾಚ್ನ ಐಎಎಸ್ ಅಧಿಕಾರಿ ಶಿಂಧೆ ಅವಿನಾಶ್ ಸಂಜೀವನ್ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಹುದ್ದೆ ವಹಿಸಲಾಗಿದೆ. ಹೆಚ್ಚುವರಿಯಾಗಿ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಜವಾಬ್ದಾರಿಯನ್ನೂ ನೀಡಲಾಗಿದೆ. ಈ ಹಿಂದೆ ಈ ಪ್ರಭಾರ ಹೊಂದಿದ್ದ ರಾಹುಲ್ ಶರಣಪ್ಪ ಸಂಕನೂರು ಅವರಿಂದ ಜವಾಬ್ದಾರಿಯನ್ನು ಹಿಂಪಡೆಯಲಾಗಿದೆ.
