ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಪರಿಷ್ಕರಣೆಗೆ ಮೊದಲು ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದರು. ಇದೀಗ ಅಂತಿಮ ಪಟ್ಟಿಯಲ್ಲಿ 4,55,00,011 ಮತದಾರರುಮಾತ್ರ ಉಳಿದಿದ್ದು, ಒಟ್ಟು 99,32,303 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಅಂತಿಮ ಪಟ್ಟಿಯಲ್ಲಿರುವ ಮತದಾರರ ವಿವರ
ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 2,25,50,493 ಪುರುಷರು, 2,29,12,355 ಮಹಿಳೆಯರು ಹಾಗೂ 2,841 ತೃತೀಯ ಲಿಂಗದ ಮತದಾರರು ಸ್ಥಾನ ಪಡೆದಿದ್ದಾರೆ.
ಇತರ ಪ್ರಮುಖ ವಿವರಗಳು ಹೀಗಿವೆ:
- ಸೇವಾ ಮತದಾರರು: 44,322
- ವಿದೇಶದಲ್ಲಿ ನೆಲೆಸಿರುವ ಭಾರತೀಯ ಮತದಾರರು: 3,252
- ವಿಶೇಷಚೇತನ ಮತದಾರರು: 5,65,340
- 18ರಿಂದ 19 ವರ್ಷದೊಳಗಿನ ಹೊಸ ಮತದಾರರು: 6,83,364
- 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು: 3,92,134
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಪರಿಶೀಲಿಸಿ
ಮತದಾರರು ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು. ಇದಕ್ಕಾಗಿ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ voters.eci.gov.in ಗೆ ಭೇಟಿ ನೀಡಬಹುದು ಅಥವಾ ವೋಟರ್ ಹೆಲ್ಪ್ಲೈನ್ ಮೊಬೈಲ್ ಆ್ಯಪ್ ಬಳಸಬಹುದು.
ಒಂದು ವೇಳೆ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಅರ್ಹ ಮತದಾರರು ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಫಾರ್ಮ್-6 ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಇದಲ್ಲದೆ, ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO) ಅಥವಾ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಅವಕಾಶವೂ ಇದೆ.
