ಬೆಂಗಳೂರು: ಮೈಸೂರು ದಸರಾ ಮಹೋತ್ಸವದ ಆಚರಣೆಯಲ್ಲಿ ರಾಜಮನೆತನಕ್ಕೆ ನೀಡಬೇಕಾದ ಗೌರವ ಹಾಗೂ ಸಾಂಪ್ರದಾಯಿಕ ಪದ್ಧತಿಗಳಿಗೆ ಯಾವುದೇ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದಸರಾ ರಾಜ್ಯದ ಹೆಮ್ಮೆಯ ಹಬ್ಬವಾಗಿದ್ದು, ಆಚರಣೆಯಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರು ದಸರಾ ಆಚರಣೆ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ದಸರಾ ಮಹೋತ್ಸವ ಸರ್ಕಾರದ ಕಾರ್ಯಕ್ರಮವೇ ಹೊರತು, ಇದು ಡಿಕೆಶಿ ಅವರ ವೈಯಕ್ತಿಕ ಕಾರ್ಯಕ್ರಮವಲ್ಲ. ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳುತ್ತೇವೆ,” ಎಂದು ಹೇಳಿದರು.
ಪ್ರಮೋದಾದೇವಿ ಒಡೆಯರ್ ಅವರ ಹೇಳಿಕೆಯನ್ನು ತಾನು ಇನ್ನೂ ಸಂಪೂರ್ಣವಾಗಿ ಗಮನಿಸಿಲ್ಲ ಎಂದು ತಿಳಿಸಿದ ಅವರು, ಹೇಳಿಕೆಯ ವಿವರಗಳನ್ನು ತಿಳಿದುಕೊಂಡ ಬಳಿಕ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು. “ಇದು ನನ್ನ ವೈಯಕ್ತಿಕ ವಿಚಾರವೂ ಅಲ್ಲ, ಪ್ರಮೋದಾದೇವಿ ಅವರ ವೈಯಕ್ತಿಕ ವಿಚಾರವೂ ಅಲ್ಲ. ಇದು ಇಡೀ ರಾಜ್ಯದ ಹೆಮ್ಮೆಯ ಹಬ್ಬದ ವಿಷಯ,” ಎಂದು ಅಭಿಪ್ರಾಯಪಟ್ಟರು.
ರಾಜಮನೆತನಕ್ಕೆ ಹಿಂದಿನಿಂದಲೂ ನೀಡಿಕೊಂಡು ಬಂದಿರುವ ಗೌರವವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ ಡಿಕೆ ಶಿವಕುಮಾರ್, ಹಳೆಯ ಸಂಪ್ರದಾಯಗಳ ಪ್ರಕಾರವೇ ಆಚರಣೆಗಳನ್ನು ನಡೆಸಲಾಗುತ್ತಿದೆ ಎಂದರು.
“ಇತಿಹಾಸದ ಪ್ರತಿಯೊಂದು ಸೂಕ್ಷ್ಮ ವಿಚಾರವೂ ನನಗೆ ತಿಳಿದಿರದೇ ಇರಬಹುದು. ಆದರೆ, ರಾಜಮನೆತನದ ಪರಂಪರೆಗೆ ಗೌರವ ನೀಡುತ್ತಾ ಬಂದಿದ್ದೇವೆ. ಈಗ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದ ನಿಯಮಗಳ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ,” ಎಂದು ಅವರು ವಿವರಿಸಿದರು.
ಇದೇ ವೇಳೆ, ದಸರಾ ಮೆರವಣಿಗೆಯಲ್ಲಿ ಆನೆಗೆ ಸಂಬಂಧಿಸಿದ ವಿಚಾರದ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, ಆನೆ ತನ್ನ ಮಾತು ಕೇಳಲಿಲ್ಲ ಎಂಬ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಈ ಬಾರಿ ಹೊಸ ಆನೆ ‘ಪ್ರಶಾಂತ’ ಮೂಲಕ ಮೆರವಣಿಗೆಯನ್ನು ಸಾಂಪ್ರದಾಯಿಕವಾಗಿ ನಡೆಸಲಾಗಿದೆ ಎಂದು ತಿಳಿಸಿದರು.
