ಡಿಸೆಂಬರ್ ಮೊದಲನೇ ವಾರದೊಳಗೆ ಬಾಕಿ ಬಿಲ್ ಪಾವತಿಸುವ ಭರವಸೆ
ಶಹಾಪುರ: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರು ಗುತ್ತಿಗೆದಾರರಿಗೆ ಕಳೆದ ಎರಡು ವರ್ಷಗಳಿಂದ ಹಣ ಬಿಡುಗಡೆ ಮಾಡಿಲ್ಲ. ಕೈಗೊಂಡಿರುವ ಕಾಮಗಾರಿಗಳ ೩೫ ಕೋಟಿ 70 ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದು ಕಾಮಗಾರಿಗಳ ಬಿಲ್ ಪಾವತಿಗಾಗಿ ಸಂಭಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಸಮಯಕ್ಕೆ ಪತ್ರ ವ್ಯವಹಾರ ನಡೆಸುತ್ತಿಲ್ಲ ಇದರಿಂದ ಸುಮಾರು ಎರಡು ವರ್ಷಗಳಿಂದ ಬಾಕಿ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾನಾಗೌಡ ಬಿರಾದಾರ ಆರೋಪಿಸಿದರು.
ಭೀಮರಾಯನಗುಡಿ ಕೆಬಿಜೆಎನ್ಎಲ್ ಕಚೇರಿ ಎದುರು ಬಾಕಿ ಬಿಲ್ ಪಾವತಿಗಾಗಿ ಮೊದಲೇ ನೀಡಿದ್ದ ಗಡುವುನಂತೆ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಎರಡು ವರ್ಷಗಳಿಂದ ಬಾಕಿ ಬಿಲ್ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಹಾಗೂ ಬಡ್ಡಿ ಪಾವತಿಸಲಾಗದೆ ವಿಷ ಕುಡಿಯುವ ಸ್ಥೀತಿಗೆ ತಲುಪಿದ್ದಾರೆ. ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸಿರುವ ಗುತ್ತಿಗೆದಾರರ ಬಿಲ್ಗಳು ಎರಡು ವರ್ಷ ಕಳೆದರು ಪಾವತಿಯಾಗಿಲ್ಲಾ. ಸರ್ಕಾರದ ಅಧೀನದಲ್ಲಿ ಅನುದಾನವಿಲ್ಲದಿದ್ದರೆ ಟೆಂಡರ್ ಪ್ರಕ್ರಿಯೆ ನಡೆಸಬಾರದು, ಇದೀಗ ಸಾಲಸೂಲ ಮಾಡಿ ಪೂರ್ಣಗೊಳಿಸಿದ ಕಾಮಗಾರಿಗೆ ಅನುದಾನ ಇಲ್ಲದೇ ತೀವ್ರ ಸಂಕಷ್ಟ ಎದುರಾಗಿದ್ದು ಗುತ್ತಿಗೆದಾರರು ಸಾಲದ ಭಯಕ್ಕೆ ಸಾವಿಗೆ ಮುಂದಾಗಿದ್ದಾರೆ. ಸರ್ಕಾರ ಬಜೆಟ್ನಲ್ಲಿ ಅನುದಾನ ಮೀಸಲಿಡದೆ ಅನುದಾನವನ್ನೆಲ್ಲ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದು, ಬೇಕಾಬಿಟ್ಟಿ ಟೆಂಡರ್ ಕರೆದು, ಕೆಲಸ ಆರಂಭಿಸಿದ್ದು, ಗುತ್ತಿಗೆದಾರರಿಗೆ ಬಿಲ್ ಹಣ ನೀಡದೆ ಸತಾಯಿಸುತಿದ್ದಾರೆ. ಇದೀಗ ಸಾಲದ ಹೊರೆ ಗುತ್ತಿಗೆದಾರರ ತಲೆ ಮೇಲಿದ್ದು ಮನೆ, ಜಮೀನು ಮಾರಾಟ ಮಾಡಿಕೊಂಡು ದಿನಗೂಲಿ ಕೆಲಸಕ್ಕೆ ತೆರಳುವ ಸ್ಥೀತಿ ಗುತ್ತಿಗೆದಾರರಿಗೆ ಬಂದೊದಗಿದೆ ಎಂದು ಅಳಲು ತೋಡಿಕೊಂಡರು.
ಸಂಕಷ್ಟದಲ್ಲಿ ಗುತ್ತಿಗೆದಾರರ ಕುಟುಂಬ
ಕೆಬಿಜೆಎನ್ಎಲ್ ನಲ್ಲಿ ಬಾಕಿ ಬಿಲ್ ಬಿಡುಗಡೆಯಾಗದ ಕಾರಣ ಗುತ್ತಿಗೆ ಕೆಲಸಗಳನ್ನೇ ನಂಬಿಕೊಂಡಿರುವ 400 ಕ್ಕೂ ಹೆಚ್ಚು ಕುಟುಂಬಗಳು ಮತ್ತು ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮಾಡಿದ ಕೆಲಸಕ್ಕೆ ಹಣ ಸಿಗದೇ, ಬ್ಯಾಂಕ್ ಸಾಲ, ಕೈ ಸಾಲ ತೀರಿಸಲಾಗದೆ ಅನೇಕ ಸಣ್ಣ ಗುತ್ತಿಗೆದಾರರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳಿಗೆ ತಳ್ಳಲ್ಪಡುತ್ತಿದ್ದಾರೆ. ಇನ್ನೂ ಸಣ್ಣ ಗುತ್ತಿಗೆದಾರರು ಸ್ಥಳೀಯ ಮಟ್ಟದ ಅಧಿಕಾರಿಗಳು ಕಿರುಕುಳದಿಂದ ಬೆಂದು ಹೋಗಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಶಿವುಕುಮಾರ ಬಡಿಗೇರ, ಸಂಗಣ್ಣ ದೊಡ್ಮನಿ, ಲೋಕೇಶ ರಾಠೋಡ, ದೊಡ್ಡಪ್ಪಗೌಡ ಪಾಟೀಲ್, ಕಳಸಪ್ಪಗೌಡ ಶಖಾಪುರ, ಭೀಮನಗೌಡ ಪಡದಳ್ಳಿ, ದೇವು ಕಂಚನಕವಿ, ಭೀಮರೆಡ್ಡಿ ಹುಲ್ಕಲ್, ಕುಮಾರರೆಡ್ಡಿ, ಅಕ್ತರ ಅಹ್ಮದ್, ಜೈರುದ್ದಿನ ಒಂಟಿ, ಅಯ್ಯಣಗೌಡ ಸಿದ್ದಪುರ, ದೊಡ್ಡಪ್ಪಗೌಡ, ಆಂಜನೇಯ , ರಾಜಕುಮಾರ ಆಂದೇಲಿ, ಬಾಲಕೃಷ್ಣ , ಭೀಮನಗೌಡ ಗಂಗನಾಳ, ಮಾಳಪ್ಪ ಕವಾತಿ ಸೇರಿದಂತೆ ಅನೇಕ ಗುತ್ತಿಗೆದಾರರು ಇದ್ದರು.
ಬಾಕಿ ಬಿಲ್ಗೆ ಸಂಭಂಧಪಟ್ಟಂತೆ ಗುತ್ತಿಗೆದಾರರ ಅನುಭವಿಸುತ್ತಿರುವ ಸಂಕಷ್ಟದ ಕುರಿತು ಸರ್ಕಾರದ ಗಮನಕ್ಕೆ ತಂದು ನವೆಂಬರ್ ಅಂತ್ಯದೊಳಗೆ ಡಿಸೆಂಬರ್ ಮೊದಲನೇ ವಾರದಲ್ಲಿ ಬಿಲ್ ಪಾವತಿಸುವ ಭರವಸೆಯನ್ನ ಉಪಮುಖ್ಯ ಅಭಿಯಂತರರು ಕೆಬಿಜೆಎನ್ಎಲ್ ಭೀಮರಾಯನಗುಡಿ. ಸಿ.ಎಂ ಅಲ್ಲೊಳ್ಳಿ ನೀಡಿದರು.
ಅಧಿಕಾರಿಗಳಿಗೆ ತಲೆನೋವು
ಸರ್ಕಾರದಿಂದ ಗುತ್ತಿಗೆದಾರರಿಗೆ ಸಕಾಲಕ್ಕೆ ಸಿಗದ ಬಾಕಿ ಬಿಲ್(ಅನುದಾನ)ದಿಂದ ನಿತ್ಯ ಗುತ್ತಿಗೆದಾರರು ಕಛೇರಿಗೆ ಅಲೆದಾಡುತ್ತಿದ್ದು, ಗೋಳು ಕೇಳುವುದೇ ಆಗಿದೆ. ಸರ್ಕಾರದ ನಡೆಯಿಂದ ಅಧಿಕಾರಿಗಳಿಗೂ ಇದು ತಲೆನೋವಾಗಿ ಪರಿಣಮಿಸಿದೆ ಎಂದು ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
