ಶಹಾಪುರ: ಬಡತನದ ಹಿನ್ನಲೇ ಸ್ವಾವಲಂಬಿ ಬದುಕು ನಡೆಸಿಕೊಂಡು ನಿತ್ಯ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಸತ್ಯಮ್ಮ, ಸೌಭಾಗ್ಯ ಹಾಗೂ ಹೊನ್ನ ನಿಂಗಮ್ಮ ಮೂವರ ಬಾಳಲ್ಲಿ ಜವರಾಯ ಆಟವಾಡಿದ್ದು, ಮೂವರನ್ನು ಕಳೆದುಕೊಂಡ ಕುಟುಂಬ ನಿತ್ಯ ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ, ಆದರೆ ಅಪಘಾತ 15 ದಿನಗಳು ಕಳೆದರು ಸಹ ಸೌಜನ್ಯಕ್ಕಾದರೂ ಈ ವರೆಗೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಬೇಟಿ ನೀಡಿಲ್ಲ ಕೂಡಲೇ ಮೃತರ ಮನೆಗಳಿಗೆ ಬೇಟಿ ನೀಡಿ ಸಾಂತ್ವನ ಹೇಳಬೇಕು ಎಂದು ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ ಮನವಿ ಮಾಡಿದ್ದಾರೆ.
ತಾಲೂಕಿನ ಮಡ್ನಾಳ ಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇನ್ನೂ 21 ಜನರಿಗೆ ಗಂಭೀರ ಗಾಯಗಳಾಗಿದ್ದು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಎಲ್ಲಾ ಕುಟುಂಬಕ್ಕೆ ಸದ್ಯ ಬರಸಿಡಿಲು ಬಡಿದಂತಾಗಿದ್ದು, ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಆಗುತ್ತಿಲ್ಲಾ. ಘಟನೆಗೆ ಸಂಬಂಧಪಟ್ಟಂತೆ ಈ ವರೆಗೆ ಮಾನವೀಯತೆಯ ದೃಷ್ಠಿಯಿಂದಾದರೂ ಒಂದು ಬಾರಿ ಆದರು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಅವರು ಆಗಲಿ ಹಾಗೂ ಸಂಸದ ಜಿ. ಕುಮಾರ ನಾಯಕ ಅವರಾಗಲಿ ಒಮ್ಮೆಯಾದರೂ ಮೃತರ ಮನೆಗಳಿಗೆ ಬೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಘಟನೆಯ ಕುರಿತು ಗಮನಕ್ಕೆ ಬಂದ ತಕ್ಷಣವೇ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ಆಸ್ಪತ್ರೆಗೆ ಬೇಟಿ ನೀಡಿ ಸಂಬಂಧಪಟ್ಟವರಿಗೆ ಸರಿಯಾದ ಚಿಕಿತ್ಸೆಗೆ ಸೂಚಿಸಿದ್ದಾರೆ. ಇದಾದ ನಂತರವೂ ಮನೆಗೆ ಬೇಟಿ ನೀಡಿ ಶಾಸಕರು ಮತ್ತು ಮಾಜಿ ಶಾಸಕರು ಇಬ್ಬರು ವೈಯಕ್ತಿಕವಾಗಿ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. 15 ದಿನಗಳು ಕಳೆದರು ಅಪಘಾತದ ಕುರಿತು ಸಚಿವರು ಹಾಗೂ ಸಂಸದರ ಗಮನಕ್ಕಿಲ್ಲವೇ ಎಂದು ಅವರು ಪ್ರಶ್ನಿಸಿದ್ದು, ಇದು ಬಡವರ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ಮಾನವೀಯತೆಯ ದೃಷ್ಠಿಯಿಂದಾದರೂ ಮೂವರು ಮಹಿಳೆಯರ ಕುಟುಂಬ ಕಣ್ಣಿರಲ್ಲಿ ಮುಳುಗಿದ್ದು, ಕೂಡಲೇ ಸಚಿವರು ಮತ್ತು ಸಂಸದರು ಅಧಿಕೃತ ಪ್ರವಾಸಗಳನ್ನು ಬದಿಗಿಟ್ಟು ಮೃತರ ಮನೆಗಳಿಗೆ ಬೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಸಹಾಯ ಮಾಡಬೇಕು.
ಕುಟುಂಬಸ್ಥರಿಗೆ ಆದಷ್ಟು ಬೇಗ ಪರಿಹಾರ ಸಿಗಬೇಕು
ಮೃತ ಕಾರ್ಮಿಕ ಮಹಿಳೆಯರು ಅತ್ಯಂತ ಬಡ ಕುಟುಂಬದವರಾಗಿದ್ದು, ತಾಯಿಯರನ್ನು ಕಳೆದುಕೊಂಡ ಮಕ್ಕಳು ನಿತ್ಯ ಗೋಳಾಟ ನಡೆಸುತ್ತಿದ್ದು ಮೂವರ ಕುಟುಂಬಗಳು ಕಣ್ಣಿರಲ್ಲೆ ಮುಳುಗಿವೆ. ಈ ಕುರಿತು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಸಹ ಕುಟುಂಬದ ಕಾಳಜಿ ವಹಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಮನವಿ ಪತ್ರ ಬರೆದಿದ್ದು, ಸರ್ಕಾರ ಈಗಾಗಲೇ ಮೃತರಿಗೆ ಸಂಬಂಧಪಟ್ಟಂತೆ ಅಗತ್ಯ ದಾಖಲೆ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಆದಷ್ಟು ಬೇಗ ಪರಿಹಾರ ಹಣವನ್ನು ಕುಟುಂಬಸ್ಥರಿಗೆ ಸಿಗುವಂತೆ ಮಾಡಬೇಕು ಎಂದು ಮಾಜಿ ಎಂಎಲ್ಸ ಅಮಾತೆಪ್ಪ ಕಂದಕೂರ ಹೇಳಿದರು.
ಕಲಬುರಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೇಣುಕಾ ಗಂಡ ಮಲ್ಲಪ್ಪ, ಪರಶುರಾಮ ಎನ್ನುವವರಿಗೆ ಗಂಭೀರವಾದ ಗಾಯಗಳಾಗಿವೆ. ಈಗಾಗಲೇ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ನಡೆಯುತ್ತಿದ್ದು ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ ಬೇಟಿ ನೀಡಿ ಆರೋಗ್ಯ ವಿಚಾರಿಸಿದರು.
