ಶಹಾಪುರ: ತಾಲೂಕಿನ ಮಾಡ್ನಳ್ ಗ್ರಾಮದಲ್ಲಿ ಭಾನುವಾರ ಬೊಲೆರೊ ಮ್ಯಾಕ್ಸ್ ಪಿಕಪ್ ವಾಹನವೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮೂವರು ಮಹಿಳಾ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಹಳಿಸಗರ ಬಡಾವಣೆ ನಿವಾಸಿಗಳಾದ ಭಾಗ್ಯಶ್ರೀ(35), ಸತ್ಯಮ್ಮ (30) ಮತ್ತು ಹೊನ್ನ ನಿಂಗಮ್ಮ(18) ಮೃತರು. ಗಂಭೀರವಾಗಿ ಗಾಯಗೊಂಡಿರುವ ಐವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಣ್ಣಪುಟ್ಟ ಗಾಯಗೊಂಡವರನ್ನು ಶಹಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ತಿ ಹೊಲದಲ್ಲಿ ಕಳೆ ತೆಗೆಯಲು ಕೂಲಿ ಕೆಲಸಕ್ಕೆ ಹೋಗಿದ್ದ 20ಕ್ಕೂ ಹೆಚ್ಚು ಮಹಿಳಾ ಕೂಲಿ ಕಾರ್ಮಿಕರು ಬೊಲೆರೋದಲ್ಲಿ ವಾಪಸ್ ಆಗುತ್ತಿದ್ದರು. ಮಾಡ್ನಳ್ ಸಮೀಪದ ರಸ್ತೆಯಲ್ಲಿ ಚಾಲಕ ವೇಗವಾಗಿ ವಾಹನ ಓಡಿಸುತ್ತಿದ್ದ.
ರಸ್ತೆಯ ಬದಿಯಲ್ಲಿ ಹೊಸದಾಗಿ ಅಳವಡಿಸುತ್ತಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ. ಡಿಕ್ಕಿಯ ರಭಸಕ್ಕೆ ವಾಹನ ಜಖಂಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿವೆ.
ವಾಹನ ಚಾಲಕ ಶೇಖಪ್ಪ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳಕ್ಕೆ ಭೀಮರಾಯನಗುಡಿ ಠಾಣೆಯ ಪಿಎಸ್ಐ ದೇವೇಂದ್ರರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ
ಭೀಕರ ರಸ್ತೆ ಅಪಘಾತದಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ಸುದ್ದಿ ತಿಳಿದ ಬಳಿಕ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕಲಬುರಗಿಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಗಾಯಾಳುಗಳಿಗೆ ಅಗತ್ಯವಾದ ಉತ್ತಮ ಚಿಕಿತ್ಸೆ ಹಾಗೂ ವೈದ್ಯಕೀಯ ನೆರವು ದೊರೆಯುವಂತೆ ವೈದ್ಯರಿಗೆ ಸೂಚಿಸಿದರು.
ಚಿಕೆತ್ಸೆ ಪಡೆಯುತ್ತಿರುವ ಗಾಯಳುಗಳು ಮತ್ತು
ಎಂಟು ಜನರ ಸ್ಥಿತಿ ಗಂಭೀರವಾಗಿದ್ದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
