ಶಹಾಪುರ: ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಪ್ರಬಲ ಅಸ್ತ್ರವಾಗಿರುವ ಸಂವಿಧಾನ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ದೇಶದ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನ್ಯಾಯಾವಾದಿ ಆರ್.ಚನ್ನಬಸು ವನದುರ್ಗ ಹೇಳಿದರು.
ನಗರದ ಆದರ್ಶ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಒಬ್ಬ ಕಾನೂನುತಜ್ಞರಾಗಿ ಭಾರತೀಯ ಸಂವಿಧಾನದ ಶಿಲ್ಪಿಯಾಗಿ ಸಮೃದ್ಧ ಬರಹಗಾರರಾಗಿ ದಲಿತೋದ್ಧಾರಕರಾಗಿ, ಅರ್ಥಶಾಸ್ತ್ರಜ್ಞರಾಗಿ ಅಪ್ರತಿಮ ಚಿಂತಕರಾಗಿ ಮಹಾಮಾನ್ಯರೆನಿಸಿಕೊಂಡ ಒಬ್ಬ ಶ್ರೇಷ್ಠ ನಾಯಕರು.
ನಿರಂತರವಾದ ಅಧ್ಯಯನದಿಂದ ಸಮಾಜದ ದೃಷ್ಠಿಕೋನವನ್ನು ನಾವು ಬದಲಾವಣೆ ಮಾಡಬಹುದು. ಸತತ ಅಭ್ಯಾಸದಿಂದ ಅಂಬೇಡ್ಕರ್ಗೆ ಭಾರತ ಸಂವೀಧಾನವನ್ನು ಬರೆಯಲು ಸಾಧ್ಯವಾಯಿತು. ಇಂದಿನ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಮೊಬೈಲ್ನಲ್ಲಿ ಕಳಿಯದೆ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಆಧುನಿಕ ಭಾರತಕ್ಕೊಂದು ಹೊಸ ದಿಕ್ಕು ತೋರಿದವರು, ಬಡವರಿಂದ ಹಿಡಿದು ಶ್ರೀಮಂತರ ತನಕ ಪ್ರತಿಯೊಬ್ಬ ವ್ಯಕ್ತಿಯೂ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ ಅಂದರೆ ಅದರ ಹಿಂದೆ ಜನರ ಹಕ್ಕಿಗೊಂದು ಭದ್ರ ಬುನಾದಿಯನ್ನು ಹಾಕಿದವರು ಬಾಬಾ ಸಾಹೇಬರು. ಸಾಕಷ್ಟು ಅಪಮಾನ, ಅವಮಾನ ತೊಂದರೆ ಎದುರಿಸಿದರೂ ಕೂಡ ಅವರು ತಮ್ಮ ಆತ್ಮವಿಶ್ವಾಸವನ್ನಾಗಲಿ, ಕಲಿಯುವ ಹಂಬಲವನ್ನಾಗಲಿ ಕಡಿಮೆ ಮಾಡಿಕೊಳ್ಳಲಿಲ್ಲ. ಅವರ ಅಂದಿನ ಆ ಹಠ ಛಲದ ಪರಿಣಾಮ ಭಾರತ ದಏಶ ಇಂದು ಈ ಮಟ್ಟಿಗಿನ ಸಾಮಾಜಿಕ ಸುಧಾರಣೆಯನ್ನು ಕಂಡಿದೆ ಎಂದರು.
ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಭೀಮಣ್ಣ ಆರ್. ಅಂಚೆಸೂಗೂರ ಮಾತನಾಡಿ, ಯುವ ಪೀಳಿಗೆಗೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಮಾದರಿ ನಾಯಕರು, ಜಗತ್ತು ಕಂಡ ಅತ್ಯಂತ ಶ್ರೇಷ್ಠ ಓದು, ಇಡೀ ವಿಶ್ವದ ಜನರ ಬದುಕಿನ ಸಾಹಿತ್ಯವನ್ನು ಅಧ್ಯಯನ ಮಾಡಿದ್ದರು. ಶಿಕ್ಷಣವನ್ನು ಅತ್ಯಂತ ಶಕ್ತಿಶಾಲಿ ಆಯುಧವೆಂದು ನಂಬಿದ್ದ ಅವರು ಓದುವ ಹವ್ಯಾಸ ಮನುಷ್ಯನ ಬದುಕನ್ನು ಬದಲಾಯಿಸುತ್ತದೆ. ಮೌಡ್ಯ ಮತ್ತು ಕಂದಾಚಾರ ಮತ್ತು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಶಿಕ್ಷಣವೇ ದಾರಿದೀಪ ಎಂದು ಸಾರಿದ್ದರು.
ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಬರಹಗಳು, ಭಾಷಣಗಳು ಮತ್ತು ಸಮಗ್ರ ವಿಚಾರಧಾರೆಗಳನ್ನು ಓದಿದಾಗ ಮಾತ್ರ ದೇಶದ ಸಮಗ್ರ ಚಿತ್ರಣ ನಿಮ್ಮ ಹೃದಯಗಳಲ್ಲಿ ಅಚ್ಚಳಿಯದೇ ಉಳಿಯಲು ಸಾಧ್ಯ ಎಂದರು. ಬಾಬಾ ಸಾಹೇಬ ಅಂಬೇಡ್ಕರ್ ಬಗ್ಗೆ ಏರ್ಪಡಿಸಿದ್ದ ಪ್ರಬಂಧ, ರಸಪ್ರಶ್ನೆಯಲ್ಲಿ ಒಟ್ಟು 25 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಪ್ರಥಮ ಬಹುಮಾನ ಪಡೆದ ಅಮುಲ್ಯ, ದ್ವಿತೀಯ ಬಹುಮಾನ ರಾಹುಲ್, ತೃತೀಯ ಬಹುಮಾನ ಪ್ರವೀಣ ತಮ್ಮದಾಗಿಸಿಕೊಂಡರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಆದರ್ಶ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಭೀಮಣ್ಣ ಪೀರಾಪುರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಇದನ್ನೂ ಓದಿ: ಸಿಎಂ ಡಿಕೆಶಿ ನೂತನ ಸಚಿವ ಸಂಪುಟ ರಚನೆ; 20 ಜನ ಸಚಿವರ ಪ್ರಮಾಣವಚನ ಸ್ವೀಕಾರ
ಈ ಸಂದರ್ಭದಲ್ಲಿ ಆದರ್ಶ ವಿದ್ಯಾಲಯ ಮುಖ್ಯ ಗುರುಗಳಾದ ಹನುಮಂತರಾಯ ಸೋಮಾಪುರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತರಾದ ಈರಣ್ಣ ಮೌರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ಧೇಶಕಿ ಉತ್ತರಾದೇವಿ ಮಠಪತಿ ಸೇರಿದಂತೆ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ನಿತ್ಯ ಮತ್ತು ಸಂಗಡಿಗರಿಂದ ಗಾಯನ, ಬಸವರಾಜರೆಡ್ಡಿ ಸ್ವಾಗತಿಸಿದರು, ಸಂಗಮೇಶ ಪಾಟೀಲ್ ನಿರೂಪಿಸಿ ವಂದಿಸಿದರು.
