ಬೆಂಗಳೂರು: ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ವತಿಯಿಂದ ಪಾರಂಪರಿಕ ಚರ್ಮ ಕುಶಲಕರ್ಮಿಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ರಾಜ್ಯಮಟ್ಟದ ಸಂವಾದ ಕಾರ್ಯಕ್ರಮ ನಿನ್ನೆ (ಸೋಮವಾರ ಜು. 20) ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಚರ್ಮ ಕುಶಲಕರ್ಮಿಗಳ ಜೀವನೋಪಾಯವನ್ನು ಆಧುನಿಕ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ ವಿಸ್ತರಣೆ ಹಾಗೂ ಉದ್ಯಮಶೀಲತೆಯೊಂದಿಗೆ ಸಂಪರ್ಕಿಸುವುದು ನಿಗಮದ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದರು. ಸಂವಾದದಲ್ಲಿ ಕುಶಲಕರ್ಮಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು, ಸಲಹೆಗಳು ಹಾಗೂ ಶಿಫಾರಸುಗಳನ್ನು ಕ್ರೋಡೀಕರಿಸಿ, ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಯೋಜನೆಗಳು ಹಾಗೂ ನೀತಿಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಿಡ್ಕರ್ ಸಲಹೆಗಾರ ಇ. ವೆಂಕಟಯ್ಯ ಅವರು ಚರ್ಮೋದ್ಯಮದ ಅಭಿವೃದ್ಧಿ, ಹೊಸ ಅವಕಾಶಗಳು, ಕೌಶಲ್ಯ ವೃದ್ಧಿ, ಜಾಗತಿಕ ಮಾರುಕಟ್ಟೆ ಹಾಗೂ ಆಧುನಿಕ ಉತ್ಪಾದನಾ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಚರ್ಮ ಕುಶಲಕರ್ಮಿಗಳ ಜೀವನಮಟ್ಟ ಸುಧಾರಣೆಗೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಚರ್ಮ ಕುಶಲಕರ್ಮಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ, ಪಾರಂಪರಿಕ ವೃತ್ತಿಯ ಸವಾಲುಗಳು, ಮಾರುಕಟ್ಟೆ ವ್ಯವಸ್ಥೆ, ನ್ಯಾಯಯುತ ಬೆಲೆ, ಕಚ್ಚಾ ವಸ್ತುಗಳ ಲಭ್ಯತೆ, ಬ್ಯಾಂಕ್ ಸಾಲ, ಸರ್ಕಾರಿ ಯೋಜನೆಗಳು, ಕೌಶಲ್ಯಾಭಿವೃದ್ಧಿ, ಬ್ರ್ಯಾಂಡಿಂಗ್, ಡಿಜಿಟಲ್ ಮಾರ್ಕೆಟಿಂಗ್, ಇ-ಕಾಮರ್ಸ್, ಕಾಮನ್ ಫೆಸಿಲಿಟಿ ಸೆಂಟರ್ (CFC), ಯುವಜನರ ಪಾಲ್ಗೊಳ್ಳುವಿಕೆ ಹಾಗೂ ಮುಂದಿನ ಪೀಳಿಗೆಯನ್ನು ಚರ್ಮೋದ್ಯಮದತ್ತ ಆಕರ್ಷಿಸುವ ಕುರಿತು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.
ಲಿಡ್ಕರ್ ವತಿಯಿಂದ ಜಾರಿಯಲ್ಲಿರುವ ಕೌಶಲ್ಯಾಭಿವೃದ್ಧಿ, ಚರ್ಮಶಿಲ್ಪಿ, ಕಾಯಕಸ್ಪೂರ್ತಿ, ಸ್ವಾವಲಂಬಿ, ಸಂಚಾರಿ ಮಾರಾಟ ಮಳಿಗೆ, ಪಾದುಕೆ ಕುಟೀರ, ನೇರ ಸಾಲ, ಮಾರುಕಟ್ಟೆ ಸಹಾಯ, ವಸತಿ ಕಾರ್ಯಾಗಾರ ಹಾಗೂ ಪ್ರಗತಿ ಲಿಡ್ಕರ್ ಕಾಲೋನಿ ಸೇರಿದಂತೆ ವಿವಿಧ ಯೋಜನೆಗಳ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಚರ್ಮ ಕುಶಲಕರ್ಮಿಗಳ ಸಾಮಾಜಿಕ, ಆರ್ಥಿಕ ಹಾಗೂ ವೃತ್ತಿಪರ ಸಬಲೀಕರಣಕ್ಕಾಗಿ ಕಾರ್ಯಸಾಧ್ಯ ಶಿಫಾರಸುಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಮುಂಡರಗಿ ನಾಗರಾಜ್ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಚರ್ಮ ಕುಶಲಕರ್ಮಿಗಳು, ಲಿಡ್ಕರ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದರು. ಇದನ್ನೂ ಓದಿ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವರ್ಧಂತಿ: ಸಚಿವ ಕೆ.ಹೆಚ್. ಮುನಿಯಪ್ಪರಿಂದ ನಮನ
ಈ ಸಂದರರ್ಭದಲ್ಲಿ ನಿಕಟ ಪೂರ್ವ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ವಸುಂಧರಾ ದೇವಿ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹೆಚ್.ನಟರಾಜ್, ಉಪಪ್ರಧಾನ ವ್ಯವಸ್ಥಾಪಕರಾದ ದ ಮೊನಪ್ಪ ಕಟ್ಟಿಮನಿ,ಪ್ರಾಣೇಶ್,ಮಾಜಿ ವಿಧಾನ ಪರಿಷತ್ ಸದಸ್ಯ ಸಿ. ರಮೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
