ರಾಮನಗರ: ರಾಜ್ಯ ರಾಜಕೀಯದಲ್ಲಿ ಬಿಡದಿ ಟೌನ್ ಶಿಪ್ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದ್ದು, ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷದ ನಾಯಕರು ಒಂದಲ್ಲ ಒಂದು ರೀತಿ ಆರೋಪ ಮಾಡುತ್ತಿರುವ ಬೆನ್ನೆಲೆ ಇಂದು (June 27) ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಬೈರಮಂಗಲಕ್ಕೆ ಭೇಟಿ ನೀಡಿದ್ದಾರೆ.
ಹೆಚ್ಡಿಕೆ ಪರ-ವಿರುದ್ಧ ರೈತರಿಂದ ಘೋಷಣೆ ಕೇಳಿಬಂದಿದೆ. ಯೋಜನೆ ವಿರುದ್ಧ ಇರುವ ರೈತರು ಹೆಚ್ಡಿಕೆ ಪರ ಮಾತನಾಡಿದರೆ, ಯೋಜನೆ ಪರ ಇರುವ ರೈತರು ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು.
ಹೆಚ್ಡಿಕೆ ಆಗಮನ ಹಿನ್ನೆಲೆಯಲ್ಲಿ ಎರಡೂ ಕಡೆಯ ರೈತರು ಭೈರಮಂಗಲದಲ್ಲಿ ಜಮಾಯಿಸಿದ್ದರು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ರೈತರ ಗಲಾಟೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಾರ್ಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಭೈರಮಂಗಲಕ್ಕೆ ಕುಮಾರಸ್ವಾಮಿ ಆಗಮಿಸಿದ ಬೆನ್ನಲ್ಲೇ ಯೋಜನೆ ಪರ ಇರುವ ರೈತರು ಘೋಷಣೆ ಕೂಗಿದರು. ರೆಡ್ ಝೋನ್ ತೆಗೆಯಿರಿ ಎಂದು ಪೊಲೀಸರಿಗೆ ಒತ್ತಾಯಿಸಿದರು. ‘ರೆಡ್ ಝೋನ್ ಮಾಡಿದ ಕುಮಾರಸ್ವಾಮಿಗೆ ಧಿಕ್ಕಾರ. ರೆಡ್ ಝೋನ್ ಪಿತಾಮಹ ಕುಮಾರಸ್ವಾಮಿ. ಯೋಜನೆ ಮಾಡಿ ಈಗ ಬೇಡಾ ಎನ್ನುವ ಕುಮಾರಣ್ಣನಿಗೆ ಧಿಕ್ಕಾರ. ಬೇಕೆ ಬೇಕು ಅಕ್ವೇರ್ ಬೇಕೆಂದು’ ರೈತರು ಆಕ್ರೋಶ ಹೊರಹಾಕಿದರು. ನಮ್ಮ ಸ್ಥಳಕ್ಕೆ ಕುಮಾರಸ್ವಾಮಿ ಬರಲೇಬೇಕೆಂದು ಆಗ್ರಹಿಸಿದರು. ಕುಮಾರಸ್ವಾಮಿ ನಮ್ಮಿಂದ ಪಲಾಯನ ಆಗಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಅವರು ಓಡಿ ಹೋಗಿದ್ದಾರೆ. ಕುಮಾರಸ್ವಾಮಿ ಓಡಿ ಹೋಗಿರೋದೆ ನಮಗೆ ವಿಜಯ ಎಂದು ಪ್ರತಿಭಟನಾಕಾರರು ಲೇವಡಿ ಮಾಡಿದರು.
