ಬೆಂಗಳೂರು: ಇಂದು ನಗರದಾದ್ಯಂತ ಕೆಂಪೇಗೌಡ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಶನಿವಾರ ಜೂನ್ 27) ಕೆಂಪೇಗೌಡರ 517ನೇ ಜಯಂತಿಯ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ಕೆಂಪೇಗೌಡರ ಆದರ್ಶದ ಮೇರೆಗೆ ಇದೀಗ ಇಡೀ ದೇಶವೇ ಬೆಂಗಳೂರಿನತ್ತ ತಿರುಗಿ ನೋಡುವ ಹಾಗೆ ಆಗಿದೆ ಎಂದು ಹೇಳಿದರು. ಕೆಂಪೇಗೌಡರು ಬೆಂಗಳೂರು ಅಭಿವೃದ್ಧಿ ಮಾಡಿರುವುದರಿಂದಲೇ ಈಗ ಕರ್ನಾಟಕ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ. ಬೆಂಗಳೂರು ಇಲ್ಲದಿದ್ದರೆ ಕರ್ನಾಟಕ ರಾಜ್ಯದ ಜನ ಕಷ್ಟದಲ್ಲಿ ಇರಬೇಕಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಿರಾ ಸ್ಫಟಿಕಪುರಿ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಸಚಿವರಾದ ಕೆ ಎಚ್ ಮುನಿಯಪ್ಪ, ಕೃಷ್ಣ ಬೈರೇಗೌಡ, ಶಾಸಕ ಪ್ರದೀಪ್ ಈಶ್ವರ್, ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಹರಿಮರಾನ್ ಮತ್ತಿತರರು ಉಪಸ್ಥಿತರಿದ್ದರು.
