ಗದಗ: ಬಿಡದಿ ಟೌನ್ ಶಿಪ್ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಷ್ಠೆ ಮಾಡಿಕೊಳ್ಳದೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್ ಟೌನ್ಶಿಪ್ ಮಾಡಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿದರೆ ಆ ಒಳ್ಳೆಯ ನಿರ್ಧಾರ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಾಕಷ್ಟು ಜಮೀನುಗಳಿವೆ. ನಾವು ಕೂಡ ಸ್ಯಾಟಲೈಟ್ ಟೌನ್ಗಳನ್ನು ಮಾಡಬೇಕು ಅಂತ. ನಾವು ಕೋಲಾರ, ಚಿಕ್ಕಬಳ್ಳಾಪುರ ಏರಿಯಾದಲ್ಲಿ ಸುಮಾರು 2000 ಎಕರೆ ಸರ್ಕಾರಿ ಭೂಮಿ ಇದೆ, ಅಲ್ಲಿ ಮಾಡಬೇಕು ಅಂತ ಯೋಚನೆ ನಡೀತಿದೆ. ಹಾಗಾಗಿ ಸರ್ಕಾರದ ಭೂಮಿ ಇರುವಂತಹ ಜಾಗದಲ್ಲಿ ಮಾಡಿ, ಅದಕ್ಕೆ ಸಕಲ ಲಾಜಿಸ್ಟಿಕ್ ವ್ಯವಸ್ಥೆಗಳನ್ನ ಮಾಡಬೇಕು, ಉದಾಹರಣೆಗೆ ಸಾಕಷ್ಟು ಕ್ಲಸ್ಟರ್ಗಳಿದೆ, ಕಾಲೇಜು, ಯೂನಿವರ್ಸಿಟಿಗಳೂ ಕೂಡ ಇವೆ. ಆ ಕೆಲಸ ಮಾಡಬೇಕು ಹೊರತಾಗಿ, ರೈತರ ಜಮೀನನ್ನು ತೆಗೆದುಕೊಳ್ಳುವುದು ಅಷ್ಟೊಂದು ಸಮಂಜಸ ಅಲ್ಲ ಎಂದು ಹೇಳಿದರು.
ನಾನು ಮುಖ್ಯಮಂತ್ರಿಗಳಿಗೆ ಸಲಹೆ ಮಾಡುವುದು ಇಷ್ಟೇ, ಪ್ರತಿಷ್ಠೆ ಮಾಡಿಕೊಳ್ಳದೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ತಮ್ಮದೇ ಆದಂತಹ ಒಂದು ವ್ಯವಸ್ಥೆ ಮಾಡಿಕೊಂಡು ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್ ಟೌನ್ಶಿಪ್ ಅನ್ನು ಮಾಡಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿದರೆ ಆ ಒಳ್ಳೆಯ ನಿರ್ಧಾರ ಆಗುತ್ತದೆ ಎಂದರು.
ಬರ ಘೊಷಿಸಲಿ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ, ಇದು ಸಂಪೂರ್ಣವಾಗಿ ಬರಗಾಲದ ಪರಿಸ್ಥಿತಿಯನ್ನ ತೋರಿಸುತ್ತಿದೆ. ಮೊದಲು ಬರಗಾಲ ಘೋಷಣೆ ಮಾಡಿದರೆ ಮುಂದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನನ್ನ ಮೊದಲನೇ ಆಗ್ರಹ ರಾಜ್ಯ ಸರ್ಕಾರಕ್ಕೆ, ಮೊದಲೇ ಒಂದು ಸರ್ವೆಯನ್ನು ಮಾಡಿ ಅದಕ್ಕೆ ಬರಗಾಲದ ಘೋಷಣೆಯನ್ನು ಮಾಡಬೇಕು. ಮುಂದೆ ಪರಿಹಾರ ಕೊಡುವುದಕ್ಕೆ ಕೇಂದ್ರದ ಅನುದಾನ ಏನೇ ವ್ಯವಸ್ಥೆ ಇದ್ದರೂ, ಮುಂಗಾರು ಮಳೆಗೆ ಈಗ ಬೆಳೆ ನಷ್ಟ ಉಂಟಾದಾಗ ಅದಕ್ಕೂ ಕೂಡ ಪರಿಹಾರ ಕೊಡುವುದಕ್ಕೆ ಬರ ಘೋಷಣೆ ಮಾಡಿದರೆ ತಾನೇ ಇದೆಲ್ಲ ಮಾಡೋಕೆ ಸಾಧ್ಯ ಎಂದರು. ಇದನ್ನೂ ಓದಿ: ಅಂಕೇಗೌಡರ ಸಂಗ್ರಹದ ಪುಸ್ತಕಗಳಿಗೆ ಕಟ್ಟಡ ವ್ಯವಸ್ಥೆಗೆ ಸೂಚನೆ: ಸಿಎಂ ಡಿಕೆಶಿ
ಮಾಧ್ಯಮದವರು ಕೃಷಿ ಸಚಿವರೇ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ ರೈತರ ಗೋಳು ಕೇಳುವವರೇ ಇಲ್ಲ. ಅಧಿಕಾರಿಗಳು, ಕೃಷಿ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಅನ್ನೋದು ಇಡೀ ರಾಜ್ಯದ ಜನತೆ ನೋಡುತ್ತಿದ್ದಾರೆ.
ಕೇಂದ್ರದ ಯೋಜನೆ ಕಾಪಿ
ಉದ್ಯೋಗ ಮತ್ತು ಜಿಐಪಿಆರ್ ಜಿಆರ್ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಇದೊಂದು ತಮ್ಮದೇ ಕಾರ್ಯಕ್ರಮ ಅಂತ ಬಹಳ ದೊಡ್ಡ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ವಲಯದಲ್ಲಿ ರಿಜಿಸ್ಟ್ರೇಶನ್ ಮಾಡುವಂತಹ ಕೆಲಸ, ಅದೇನು ಅದರಿಂದ ಏನು ಸರ್ಕಾರ ಏನು ಎಂಪ್ಲಾಯ್ಮೆಂಟ್ ಕೊಡೋದಕ್ಕೆ ಆಗಲ್ಲ.
ಆದರೆ, ಇದು ಇಡೀ ರಾಷ್ಟ್ರದಲ್ಲೇ ಮೊದಲು ಅಂತ ಏನು ಕ್ಲೈಮ್ ಮಾಡ್ತಾರೋ, ರಾಷ್ಟ್ರದಲ್ಲಿ ಮೊದಲು ಅಲ್ಲ. ಕೇಂದ್ರ ಸರ್ಕಾರ ಈಗಾಗಲೇ ಅಂತಹ ಪೋರ್ಟಲ್ ಅನ್ನು ಮಾಡಿದೆ. ‘ಜಾಬ್ ಸೀಕರ್ಸ್’ ಮತ್ತು ‘ಜಾಬ್ ಪ್ರೊವೈಡರ್ಸ್’ ಯಾರಿಗೆ ಕೆಲಸ ಬೇಕು ಮತ್ತು ಯಾರು ಕೆಲಸ ಕೊಡ್ತಾರೆ, ಅವರ ಮಧ್ಯೆ ಒಂದಕ್ಕೊಂದು ಎಕ್ಸ್ಚೇಂಜ್ ಮಾಡಿ ಈಗಾಗಲೇ ಆ ಪೋರ್ಟಲ್ ನಿಂದ 45 ಲಕ್ಷ ಜನರಿಗೆ ಕೆಲಸ ಸಿಕ್ಕಿದೆ.
