ಬೆಂಗಳೂರು: ಮರಗಳಿಲ್ಲದ ಭೂಮಿ ಊಹಿಸಲು ಸಾಧ್ಯವಿಲ್ಲ… ಪರಿಸರವಿಲ್ಲದೆ ಬದುಕು ಊಹಿಸಲು ಕೂಡಾ ಸಾಧ್ಯವಿಲ್ಲ. ಈ ಸಂದೇಶವನ್ನು ಸಾರುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಇಂದು (ಶುಕ್ರವಾರ ಜೂನ್ 5) ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಖಿಲ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ರೋಶ್ನಿ ಗೌಡ ಅವರ ನೇತೃತ್ವದಲ್ಲಿ ಹಾಗೂ ಹಲವು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮದ ನಡೆಯಿತು. ಇನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು. ಅಷ್ಟೇ ಅಲ್ಲ, ಬೀಜಗಳಿಂದ ಗಿಡಗಳನ್ನು ಹೇಗೆ ಬೆಳೆಸಬೇಕು, ಮಣ್ಣು ಮತ್ತು ಗೊಬ್ಬರವನ್ನು ಹೇಗೆ ಬಳಸಬೇಕು ಎಂಬ ಕುರಿತು ತಜ್ಞರಿಂದ ಪ್ರಾಯೋಗಿಕ ತರಬೇತಿಯನ್ನೂ ಪಡೆದರು. ಪರಿಸರ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಸಾಧ್ಯ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗಬಾರದು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಗಿಡ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.
ನಂತರ ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರೋಶ್ನಿ ಗೌಡ ಮಾತನಾಡಿ, ಪರಿಸರ ಸಂರಕ್ಷಣೆ ಏಕೆ ಮಾಡಬೇಕು ಎಂಬದನ್ನ ವಿವರಿಸಿದ್ರು…
ಒಟ್ಟಾರೆ, ಮಾತಿಗಿಂತ ಕಾರ್ಯವೇ ಮುಖ್ಯ ಎಂಬಂತೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಈ ಕಾರ್ಯಕ್ರಮ, ವಿದ್ಯಾರ್ಥಿಗಳಲ್ಲಿ ಹಸಿರು ಭವಿಷ್ಯದ ಕನಸನ್ನು ಬಿತ್ತುವಲ್ಲಿ ಯಶಸ್ವಿಯಾಯಿತು. ವಿಶ್ವ ಪರಿಸರ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ, ಪರಿಸರದ ಬಗ್ಗೆ ಜವಾಬ್ದಾರಿಯ ಅರಿವು ಮೂಡಿಸಿದ ಅರ್ಥಪೂರ್ಣ ವೇದಿಕೆಯಾಗಿ ಗಮನ ಸೆಳೆಯಿತು. ಇದನ್ನೂ ಓದಿ
ಗಿಡ ನೆಟ್ಟು ನೀರಿರೆದ ರಾಹುಲ್ ಗಾಂಧಿ
ಈ ಸಂದರ್ಭದಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿಗಳು ಪ್ರೊಫೆಸರ್ ಬಿಕೆ ಮೋಹನ್ ಕುಮಾರ್, ರಿಜಿಸ್ಟರ್ ಆದ ಶ್ರೀಮತಿ ಆದಮ್ ಫಾತಿಮಾ, ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಕೆ ಶಶಿಕಲಾ, ಖಜಾಂಜಿಯಾದ ವೀಣಾ ಕೃಷ್ಣಮೂರ್ತಿ, ರಾಜ್ಯ ಗೌರವ ಅಧ್ಯಕ್ಷರಾದ ಶ್ರೀಮತಿ ಗೀತಾಮಣಿ ಹಾಗೂ ಇನ್ನಿತರ ಪದಾಧಿಕಾರಿಗಳು ಕಾರ್ಯಕ್ರಮವನ್ನು ನೆರವೇರಿಸಿದರು.
