ಬೆಂಗಳೂರು: ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಭೋವಿ ಸಮಾಜಕ್ಕೆ ಈ ಬಾರಿಯ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಭೋವಿ ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ನಗರದ ಮೌರ್ಯ ಹೋಟೆಲ್ ನಲ್ಲಿ ಇಂದು (ಶುಕ್ರವಾರ ಜೂನ್ 5) ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಭೋವಿ ಸಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ ಹಾಗಾಗಿ ಸಮುದಾಯದ ಏಳಿಗೆಗಾಗಿ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯದ ಅಗತ್ಯವಿದೆ ಎಂಬದು ನನ್ನ ಮತ್ತು ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಕಳಕಳಿಯನ್ನು ಅರ್ಥಮಾಡಿಕೊಳ್ಳಬೇಕು.
ಈಗಾಗಲೇ ನೂತನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗಿದ್ದು, ಇಬ್ಬರೂ ಪ್ರಬಲ ನಾಯಕರಿಂದ ಅತ್ಯಂತ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಶ್ರೀಗಳು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಅಮರ ವಾಣಿಯಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟ ವಾಗಬೇಕು. ಬಸವಣ್ಣನವರ ಅನುಭವ ಮಂಟಪ ದ ಆಶಯದಂತೆ ಪ್ರಸ್ತುತ ಸಚಿವ ಸಂಪುಟದಲ್ಲಿ ರಾಜ್ಯದ ಎಲ್ಲಾ ಸರ್ವ ಸಮೂಹಗಳಿಗೂ ಸಮಾನ ಆದ್ಯತೆ ಮತ್ತು ಪ್ರಾತಿನಿಧ್ಯ ಸಿಗುವಂತಾಗಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಅವರ ಸುದೀರ್ಘ ಹೋರಾಟ, ಪಕ್ಷದ ಮೇಲಿನ ಅಚಲ ನಿಷ್ಠೆ, ನಿರಂತರ ಜನಸೇವೆ ಮತ್ತು ಅಜೇಯ ಮನೋಬಲಕ್ಕೆ ಇಂದು ಮುಖ್ಯಮಂತ್ರಿ ಹುದ್ದೆಯ ಫಲ ದೊರೆತಿದೆ. ಇದು ಕೇವಲ ‘ಯೋಗ’ವಲ್ಲ, ಬದಲಿಗೆ ಅವರ ‘ಯೋಗ್ಯತೆ’ಗೆ ಸಿಕ್ಕ ಸತ್ಫಲವಾಗಿದೆ ಎಂದು ಶ್ರೀಗಳು ಶ್ಲಾಘಿಸಿದರು. ಇದನ್ನೂ ಓದಿ: ಜರ್ಮನಿ ನಿಯೋಗದ ಜತೆ ಸಿಎಂ ಡಿಕೆಶಿ ಹೂಡಿಕೆ ಕುರಿತು ಚರ್ಚೆ
ಭೋವಿ ಜನಾಂಗದ ಒಳಿತಿಗಾಗಿ ಮತ್ತು ಅವರ ಅಭಿವೃದ್ಧಿಗಾಗಿ ಸಮುದಾಯದಿಂದ ಒಬ್ಬ ಸಚಿವರನ್ನು ಆಯ್ಕೆ ಮಾಡಬೇಕು. ಸಮಾಜದಲ್ಲಿ ಸಚಿವರಾಗಿ ಸೇವೆ ಸಲ್ಲಿಸಲು ಸಮರ್ಥ ಹಾಗೂ ಹಿರಿಯ ನಾಯಕರಿದ್ದು, ಈ ಕೆಳಗಿನವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು:
ಶ್ರೀ ಶಿವರಾಜ ತಂಗಡಗಿ, ಈಗಾಗಲೇ ಮೂರು ಬಾರಿ ಸಚಿವರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ.
ಶ್ರೀ ಎ. ಸಿ. ಶ್ರೀನಿವಾಸ್, ಸತತ 15 ವರ್ಷಗಳ ಕಾಲ ಕೆಪಿಸಿಸಿ ಕಾರ್ಯದರ್ಶಿಯಾಗಿ ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸಿದ್ದಾರೆ.
ಶ್ರೀ ವೆಂಕಟೇಶ್, ಸುದೀರ್ಘ ರಾಜಕೀಯ ಇತಿಹಾಸವಿರುವ ಹಿನ್ನೆಲೆಯುಳ್ಳ ಪ್ರಭಾವಿ ಕುಟುಂಬದಿಂದ ಬಂದವರಾಗಿದ್ದಾರೆ.
ವಿಧಾನ ಪರಿಷತ್‌ನಲ್ಲೂ ಪ್ರಾತಿನಿಧ್ಯಕ್ಕೆ ಆಗ್ರಹ
ಕೇವಲ ಸಚಿವ ಸಂಪುಟ ಮಾತ್ರವಲ್ಲದೆ, ವಿಧಾನ ಪರಿಷತ್ ಸದಸ್ಯತ್ವದ (MLC) ಆಯ್ಕೆಯಲ್ಲೂ ಸಹ ಭೋವಿ ಸಮಾಜದ, ಪಕ್ಷದ ನಿಷ್ಠಾವಂತ ಹಾಗೂ ಹಿರಿಯ ಮುಖಂಡರಿಗೆ ಹೆಚ್ಚಿನ ಆದ್ಯತೆ ಮತ್ತು ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಸರ್ಕಾರಕ್ಕೆ ಹಾಗೂ ಹೈಕಮಾಂಡ್‌ಗೆ ಆಗ್ರಹಪೂರ್ವಕ ಮನವಿ ಮಾಡಿದರು.
