ವಿಜಯಪುರ: ಕೊಲೆ, ಸುಲಿಗೆ, ದರೋಡೆ ಕೃತ್ಯಗಳಿಂದಲೇ ಕುಖ್ಯಾತಿ ಪಡೆದಿರುವ ಭೀಮಾತೀರದಲ್ಲಿ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದೆ. ಕರ್ನಾಟಕ-ಮಹಾರಾಷ್ಟ್ರದ ಗಡಿಯ ಭೀಮಾನದಿ ಪಾತ್ರದಲ್ಲಿರುವ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ಶುಕ್ರವಾರ ಮಧ್ಯಾಹ್ನ ಒಂದೇ ಕುಟುಂಬದ ನಾಲ್ವರು ಸದಸ್ಯರು ಹಾಗೂ ಜೊತೆಗಿದ್ದ ಇಬ್ಬರು ಅಮಾನುಷವಾಗಿ ಹತ್ಯೆಗೀಡಾಗಿದ್ದಾರೆ.
ಚಡಚಣ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದು ಊರ್ಫ್ ಚಂದ್ರಕಾಂತ ನಿರಾಳೆ (55), ದುಂಡಪ್ಪ ರೇವಣಸಿದ್ದಪ್ಪ ನಿರಾಳೆ (65), ಶಿವಪುತ್ರ ರೇವಣಸಿದ್ದ ನಿರಾಳೆ (58), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಹಾಗೂ ಶಬ್ಬಿರ ನದಾಫ್ (45) ಮೃತರು. ದಸೂರ ಗ್ರಾಮದ ಅರವಿಂದ ಯಶವಂತ ಕಟಗೆ, ಮಹಾರಾಷ್ಟ್ರದ ದಸೂರ ಗ್ರಾಮದ ಜೆಸಿಬಿ ಚಾಲಕ ಸಂದೀಪ ಭಾರತ ಮಾನೆ ಗಾಯಗೊಂಡವರು.
ಜಮೀನು ವಿವಾದವೇ ಘಟನೆಗೆ ಕಾರಣ ಎನ್ನಲಾಗಿದ್ದು, ಶುಕ್ರವಾರ ಜಮೀನು ಬಳಿ ತೆರಳಿದ್ದ ಸಂದರ್ಭ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳ ತಂಡ ಕಣ್ಣಿಗೆ ಖಾರದ ಪುಡಿ ಎರಚಿ, ಕಬ್ಬು ಕತ್ತರಿಸುವ ಆಯುಧದಿಂದ ಕೃತ್ಯ ಎಸಗಿದೆ. ಮೃತದೇಹಗಳು ಹಾಗೂ ಗಾಯಾಳುಗಳನ್ನು ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಗೋವಿಂದಪುರದಲ್ಲಿ ವಿವಾದದ ಭಾಗವಾಗಿರುವ ಕುಟುಂಬವೊಂದರ ಕೈವಾಡದ ಶಂಕೆ ವ್ಯಕ್ತವಾಗಿದೆ.
ಚಂದು ನಿರಾಳೆ, ರಾಹುಲ್ ನಿರಾಳೆ, ದುಂಡಪ್ಪ ನಿರಾಳೆ, ಸಮರ್ಥ ನಿರಾಳೆ, ಶಿವಪುತ್ರ ನಿರಾಳೆ, ಶಬ್ಬಿರ ನದಾಫ್
ಘಟನೆಗೆ ಕಾರಣ
ನಿರಾಳೆ ಕುಟುಂಬ ಗೋವಿಂದಪುರ ದಲ್ಲಿ ಇತ್ತೀಚೆಗೆ ಖರೀದಿಸಿದ್ದ 25 ಎಕರೆ ಜಮೀನು ಕಳೆದ 15-16 ವರ್ಷ ಪಾಳು ಬಿದ್ದಿತ್ತು. ಈ ಜಮೀನಿನ ಕುರಿತು ವಿವಾದಗಳಿದ್ದವು. ಘಟನೆಯಲ್ಲಿ ಗುಂಡಿನ ದಾಳಿ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ದಾಳಿ ಕುರಿತು ಖಚಿತವಾಗಲಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿದ್ದಾರೆ.
ಸ್ಥಳದಲ್ಲಿ ಎಎಸ್ಪಿ, ಇಂಡಿ ಡಿವೈಎಸ್ಪಿ, ಸಿಪಿಐ ಸೇರಿ ಪೊಲೀಸರ ತಂಡ ಬೀಡು ಬಿಟ್ಟಿದೆ.
ಹಳೆಯ ವೈಷಮ್ಯ ಕಾರಣ
ಗೋವಿಂದಪುರದ ಕಲ್ಲನಗೌಡ ಈಶ್ವರಗೌಡ ಪಾಟೀಲ ಎಂಬುವರ ಪುತ್ರ ಶಿವಾನಂದ ಎಂಬಾತ ಅದೇ ಊರಿನ ಗಾಣಿಗ ಸಮುದಾಯದ ಹುಡುಗಿಯನ್ನು ಹಿಂದೆ ಅಪಹರಿಸಿಕೊಂಡು ಹೋಗಿದ್ದ. ಇದರಿಂದ ಆ ಸಮುದಾಯದ ಶಶಿಕಾಂತ ರಮೇಶ ತೇಲಿ, ಪ್ರಶಾಂತ ರಮೇಶ ತೇಲಿ, ಕಾಮನಿಂಗ ಸಂಗಪ್ಪ ತೇಲಿ, ಮಹಾದೇವ ಸಂಗಪ್ಪ ತೇಲಿ ಎಂಬುವರು ಶಿವಾನಂದನನ್ನು ಕೊಲೆ ಮಾಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಗಳಿಗೆ ಶಿಕ್ಷೆಯಾಗಿತ್ತು. ಆರೋಪಿತರು ತಮ್ಮ ಮೇಲೆ ಪ್ರಕರಣ ದಾಖಲಾದ ನಂತರ ಗೋವಿಂದಪುರದಲ್ಲಿನ ಜಮೀನನ್ನು ಬಿಟ್ಟು ಬೇರೆ ಊರಿಗೆ ಹೊರಟು ಹೋಗಿದ್ದರು. ಅಂದಿನಿಂದ ಆ ಜಮೀನಿನಲ್ಲಿ ಉಳುಮೆ ಮಾಡುತ್ತಿರಲಿಲ್ಲ. ಇದೇ ಜಮೀನನ್ನು ನಿರಾಳೆ ಕುಟುಂಬ ಖರೀದಿಸಿತ್ತು.
ಈ ವಿಷಯದ ಬಗ್ಗೆ ತಕರಾರು ಉಂಟಾಗಿಯೇ ಕೊಲೆಗೈಯ್ಯಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಇರುವುದಾಗಿ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
