ಬೆಂಗಳೂರು: ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಸಹಕರಿಸಿ, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದ್ದಾರೆ.
ಸರ್ವಜ್ಞನಗರ ಶಾಸಕರೂ ಆಗಿರುವ ಸಚಿವರಾದ ಕೆ.ಜೆ.ಜಾರ್ಜ್ ಅವರು ಇಂದು (ಬುಧವಾರ ಮೇ 21) ಕ್ಷೇತ್ರದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಕೆ-ರೈಡ್ ವತಿಯಿಂದ ಕೈಗೊಂಡಿರುವ ಕಾಮಗಾರಿ ಸ್ಥಳಕ್ಕೆ ತೆರಳಿ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಕೆ-ರೈಡ್ ವತಿಯಿಂದ ಕೈಗೊಂಡಿರುವ ಕಾಮಗಾರಿ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಚರಂಡಿ ಕಾಮಗಾರಿಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಇದೇ ವೇಳೆ ರೈಲ್ವೆ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಇದರಿಂದ ನಮ್ಮ ಕೆಲಸಗಳಿಗೆ ಅಡಚಣೆ ಆಗುತ್ತಿದೆ ಎಂದು ಜಿಬಿಎ ಅಧಿಕಾರಿಗಳು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, “ನೀವು ಅಧಿಕಾರಿಗಳು ಎಲ್ಲಿದ್ದರೂ ಸಂಬಳ ಬರುತ್ತದೆ. ಜನರ ಪರವಾಗಿ ಮಾನವೀಯತೆಯಿಂದ ಸ್ಪಂದಿಸಿ ಕೆಲಸ ಮಾಡಿ. ಜಿಬಿಎ ಅಧಿಕಾರಿಗಳ ಜೊತೆಗೂಡಿ ಕೆಲಸ ನಿರ್ವಹಿಸಿ,” ಎಂದು ರೈಲ್ವೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದನ್ನೂ ಓದಿ: ಅಂತಿಮ ಗಡುವಿನೊಳಗಾಗಿ ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಮಹೇಶ್ವರ್ ರಾವ್
ಸದ್ಯದಲ್ಲೇ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರು ಸರ್ವಜ್ಞನಗರ ಕ್ಷೇತ್ರಕ್ಕೆ ಬರುತ್ತಾರೆ. ನಮ್ಮ ಅಧಿಕಾರಿಗಳು ಸಮಸ್ಯೆಯ ಕುರಿತು ವಿವರ ನೀಡುತ್ತಾರೆ. ರೈಲ್ವೆ ಉನ್ನತಾಧಿಕಾರಿಗಳು ಬಂದು ಉತ್ತರಿಸಿ, ಸಮಸ್ಯೆ ಬಗೆಹರಿಸಲಿ. ನಮ್ಮ ಜನರಿಗೆ ಯಾವುದೇ ಸಮಸ್ಯೆ ಆಗಬಾರದು, ನಾವು ಜನರಿಗಾಗಿ, ಜನರ ಘನತೆಯ ಬದುಕಿಗಾಗಿ ಕೆಲಸ ಮಾಡಬೇಕು ನಮ್ಮ ಧ್ಯೇಯವೂ ಅದೇ ನಮ್ಮ ಬದ್ಧತೆಯೂ ಅದೇ ಆಗಿದೆ, ಎಂದರು.
