ಬೆಂಗಳೂರು: ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನ ಈಡೇರಿಸಬೇಕೆಂದು ಈಗಾಗಲೇ ಮೇ 18 ರಿಂದ ಮುಷ್ಕರವನ್ನು ಪ್ರಾರಂಭಿಸಿದ್ದು, ಸರ್ಕಾರ ಸಾರಗೆ ನೌಕರರ ಮುಷ್ಕರಕ್ಕೆ ಇಂದು (ಮಂಗಳವಾರ ಮೇ 19) ಸ್ಪಂದಿಸದೆ ಹೋದರೆ ರಾತ್ರಿ ಇಡಿ ಮುಷ್ಕರ ಮಾಡಲಾಗುವುದು ಎಂದು ಸಾರಿಗೆ ನೌಕರರು ತಿಳಿಸಿದ್ದಾರೆ.
ಹೌದು, ಕಾರ್ಮಿಕ ಇಲಾಖೆ ಜೊತೆ ನಡೆದ ಸಂಧಾನ ಸಭೆ ವಿಫಲವಾದ ಬಳಿಕ ಮುಷ್ಕರದ ಶುರುವಾಗುವ ಸಾಧ್ಯತೆ ದಟ್ಟವಾಗ್ತಿದೆ. ಸಂಧಾನ ಸಭೆಯಲ್ಲೂ ಮನವೊಲಿಕೆಗೆ ಸಾರಿಗೆ ನೌಕರ ಸಂಘಟನೆ ಮುಖಂಡರು ಬಗ್ಗಿರಲಿಲ್ಲ. ಪಟ್ಟು ಬಿಡದ ನೌಕರರು ಸರ್ಕಾರಕ್ಕೆ ಮತ್ತೊಂದು ಆಫರ್ ಕೂಡ ನೀಡಿದ್ದರು. ಅದರಂತೆ ಇಂದು ಡೆಡ್ಲೈನ್ಗೆ ಕೊನೆಯ ದಿನವಾಗಿರುವ ಕಾರಣ ಸರ್ಕಾರ ಮತ್ತೆ ಮಾತುಕತೆಗೆ ಬಂದು ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹ ಮಾಡಿದ್ದಾರೆ.
ಅತ್ತ ಸರ್ಕಾರದ 3 ವರ್ಷ ಪೂರ್ಣಗೊಂಡ ಸಂಭ್ರಮದ ಸಮಾರಂಭ ಕೂಡ ನಡೆಯುತ್ತಿದೆ. ಎಲ್ಲಾ ಸಚಿವರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸಂಭ್ರಮದ ನಡುವೆ ಸಿಎಂ ಸಭೆ ಮಾಡಿ, ನೌಕರರ ಮನವೊಲಿಸುತ್ತಾರಾ? ಅಥವಾ ಸಾರಿಗೆ ಸಚಿವರ ಹೆಗಲಿಗೆ ಜವಾಬ್ದಾರಿ ನೀಡುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
