ಕೊಪ್ಪಳ: ರಾಜ್ಯ ರಾಜಕೀಯದಲ್ಲಿ ಮೇ 15ರ ನಂತರ ಮಹಾ ಬದಲಾವಣೆಯಾಗುತ್ತದೆ ಎಂದು ಈಗಾಗಲೇ ಎಲ್ಲಾ ವಲಯಗಳಿಂದ ಮಾತುಕತೆ ನಡೆಯುತ್ತಿತ್ತು. ಆದರೆ ಇದೀಗ ಈ ಮಾತುಕತೆಗಳೆಲ್ಲ ಸುಳ್ಳಾದಂತಿದೆ.
ಹೌದು, ಸಿಎಂ ಬದಲಾವಣೆ ಕೂಗು ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತದೆ. ಆದರೆ ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಅವರು ಹೇಳುವ ಪ್ರಕಾರ ಇನ್ನೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಇಂದು (ಶನಿವಾರ ಮೇ 16) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಗೊತ್ತಿರುವ ಪ್ರಕಾರ ರಾಜ್ಯದಲ್ಲಿ ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಒಂದು ವೇಳೆ ಸಿಎಂ ಬದಲಾವಣೆ ಅನಿವಾರ್ಯತೆ ಎದುರಾದರೆ ಸಿಎಂ ಸಿದ್ದರಾಮಯ್ಯ ಅವರನ್ನ ಬಿಟ್ಟರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಸಿಎಂ ಆಗುವ ಅರ್ಹತೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕರೆಗೆ ಸ್ಪಂದಿಸಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ ವಿಜಯೇಂದ್ರ
ವರಿಷ್ಠರು ಬದಲಾವಣೆ ಮಾಡಬೇಕು ಅಂದರೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು, ಆದರೆ ಆ ಪರಿಸ್ಥಿತಿ ಉದ್ಭವಿಸಿಲ್ಲ. ಮೇ 30ರೊಳಗೆ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡಬಹುದು. 3 ವರ್ಷ ಆಯ್ತು, ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು. ಜನಪರ ಆಡಳಿತ ಕೊಟ್ರೆ 2028ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಸಹಾಯ ಆಗುತ್ತೆ ಎಂದಿದ್ದಾರೆ.
