ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್ ನಲ್ಲಿ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ಈ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಒಂದು ವರ್ಷದವರೆಗೆ ಯಾರು ಕೂಡ ಚಿನ್ನ ಖರೀದಿ ಮಾಡಬೇಡಿ ಹಾಗೂ ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸುವುದರ ಜೊತೆಗೆ ವರ್ಕ ಫ್ರಮ್ ಹೋಮ್ ಮಾಡಬೇಕೆಂದು ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಇಂದು (ಸೋಮವಾರ ಮೇ 11) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿನ್ನ ಖರೀದಿ ಮಾಡಬೇಡಿ ಅಂತ ಹೇಳೋ ಮೋದಿಯವರು ಚಿನ್ನದ ಬೆಲೆ ಯಾಕೆ ಜಾಸ್ತಿ ಆಯ್ತು ಅನ್ನೋದು ಯಾಕೆ ಹೇಳ್ತಿಲ್ಲ ಎಂದು ಪ್ರಶ್ನಿಸಿದ್ದರು. ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಅಂತ ಹೇಳ್ತಿದ್ದಾರೆ. ಆದರೆ ಯಾಕಾಯ್ತು ಅಂತ ಹೇಳ್ತಿಲ್ಲ.
ಜನರಿಗೆ ಯಾರಿಂದ ತೊಂದರೆ ಆಯ್ತು ಅಂತ ಮೋದಿ ಅವರೇ ವಿವರಣೆ ನೀಡಬೇಕು. ಮದುವೆ ಮಾಡೋರು, ಮುಂಜಿ ಮಾಡೋರು ಯಾರು ಚಿನ್ನ ತೆಗೆದುಕೊಳ್ಳಬೇಡಿ ಅಂತ ಹೇಳೋಕೆ ಆಗುತ್ತಾ? ನೀವು ಜನರಿಗೆ ಸಲಹೆ ಏನು ಬೇಕಿದ್ರು ಕೊಡ್ತೀರಾ. ಆದರೆ ಕೊರೋನಾ ಸಮಯದಲ್ಲಿ ದೀಪ ಹಚ್ಚಿ ಅಂದ್ರಿ, ದೀಪ ಹಚ್ಚಿದ್ವಿ, ಚಪ್ಪಾಳೆ ತಟ್ಟಿ ಅಂದ್ರಿ, ಚಪ್ಪಾಳೆ ತಟ್ಟಿದ್ವಿ. ಏನಾದ್ರೂ ನಿಂತುಕೊಳ್ತಾ, ಏನು ನಿಂತಿಲ್ಲ. ಪ್ರ್ಯಾಕ್ಟಿಕಲ್ ಆಗಿ ಇರಬೇಕು ಎಂದು ಹೇಳಿದ್ದಾರೆ.
ಅವರ ಬದುಕಿನಲ್ಲಿ ಕಷ್ಟನೋ, ಸುಖನೋ, ಸಾಲ, ಸೋಲನೋ ಮಾಡಿ ಅವರು ಜೀವನ ಮಾಡ್ತಾರೆ. ಓಡಾಟ ನಡೆಸೋರಿಗೆಲ್ಲ ಸರ್ಕಾರಿ ಬಸ್‌ನಲ್ಲಿ ಓಡಾಡಿ ಅಂದ್ರೆ ಆಗುತ್ತಾ? ಮೊದಲು ಆಫೀಸರ್‌ಗಳಿಗೆ ಹೇಳಲಿ. ಸೆಂಟ್ರಲ್ ಗೌರ್ನಮೆಂಟ್ ಆಫೀಸರ್‌ಗಳು ನೀವು ನಿಮ್ಮ ಗಾಡಿಗಳಲ್ಲಿ ಓಡಾಡಬೇಡಿ ಮೆಟ್ರೋ ಅಥವಾ ಸರ್ಕಾರಿ ಬಸ್‌ನಲ್ಲಿ ಹೋಗಿ ಅಂತ ಹೇಳಿ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
ಮೊದಲು ಅಧಿಕಾರಿಗಳಿಗೆ, ಅವರ ಮಂತ್ರಿಗಳಿಗೆ ತಾಕೀತು ಮಾಡಲಿ. ಸೆಂಟ್ರಲ್ ಮಿನಿಸ್ಟರ್‌ಗಳಿಗೆ ತಾಕೀತು ಮಾಡಲಿ. ಅವರ ಸರ್ಕಾರದಲ್ಲಿರುವ ಎಲ್ಲ ಮಂತ್ರಿಗಳಿಗೆ ತಾಕೀತು ಮಾಡಲಿ. ನೀವು ಯಾರು ಇನ್ನು ಮುಂದೆ ಪೆಟ್ರೋಲ್ ಗಾಡಿಯಲ್ಲಿ ಹೋಗಬೇಡಿ. ಸರ್ಕಾರಿ ಬಸ್‌ನಲ್ಲಿ ಹೋಗಿ, ಮೆಟ್ರೋ ಮತ್ತು ಟ್ರೈನ್‌ನಲ್ಲಿ ಹೋಗಿ ಅಂತ ಅವರಿಗೆಲ್ಲ ಹೇಳಲಿ. ಮೊದಲು ನಾವು ನಡೆದುಕೊಳ್ಳಬೇಕು. ಆಮೇಲೆ ಸಾಮಾನ್ಯ ಜನರಿಗೆ ಹೇಳಬೇಕು. ನಾನು ಐಷಾರಾಮಿ ಕಾರು ಇಟ್ಟುಕೊಂಡು ನಾನು ಮಾತ್ರ ಐಷಾರಾಮಿ ಕಾರಲ್ಲಿ ಓಡಾಡೋದು, ಸಾಮಾನ್ಯ ಜನ ನಾರ್ಮಲ್ ಆಗಿ ಓಡಾಡೋದು ಇದೆಲ್ಲ ಆಗದೇ ಇರುವ ಕಥೆ ಎಂದು ವ್ಯಂಗ್ಯವಾಡಿದ್ದಾರೆ.
