ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಲೆ ಎಬ್ಬಿಸಿರುವ ನಟ ವಿಜಯ ಅವರು ಎಂದು ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹೌದು ಎಲ್ಲಾ ಅಡೆತಡೆಗಳನ್ನು ದಾಟಿ ಇದೀಗ ಬಹುಮತ ಸಿಕ್ಕ ನಂತರ ಟಿವಿಕೆ ಪಕ್ಷದ ಸ್ಥಾಪಕ ನಟ ವಿಜಯ್ ಅವರು ಇಂದು (ಭಾನುವಾರ ಮೇ 10) ತಮಿಳುನಾಡಿನಲ್ಲಿ ಅಧಿಕೃತವಾಗಿ ಸಿಎಂ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸುವ ಮೂಲಕ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇನ್ನು ವಿಜಯ್ ಅವರು ತಮ್ಮ ಸಂಪುಟದಲ್ಲಿ 9 ಮಂದಿ ಶಾಸಕರಿಗೆ ಮಂತ್ರಿಗಿರಿ ನೀಡಿದ್ದಾರೆ. ಟಿವಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದರಿಂದ ಈ ಪಕ್ಷಗಳ ಶಾಸಕರು ಸಂಪುಟ ಸೇರುತ್ತಿಲ್ಲ.
ಈ ಹಿಂದೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ವಿಸಿಕೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿತ್ತು. ಆದರೆ ವಿಜಯ್ ಸರ್ಕಾರದಲ್ಲಿ ಸದ್ಯಕ್ಕೆ ಯಾರಿಗೂ ಡಿಸಿಎಂ ಸ್ಥಾನ ನೀಡಿಲ್ಲ. ಇದನ್ನೂ ಓದಿ: ಜನಸಾಗರ ನೋಡಿ ಮಾತು ಬರುತ್ತಿಲ್ಲ; ಭಾವುಕರಾದ ಬಿಎಸ್‌ವೈ
ಸರ್ಕಾರ ರಚನೆಯ ಬೆನ್ನಲ್ಲೇ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಮೇ 13ರವರೆಗೆ (3 ದಿನಗಳು) ಗಡುವು ನೀಡಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ವಿಜಯ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.
