ಬೆಂಗಳೂರು: ತಮಿಳುನಾಡಿನಲ್ಲಿ ಹೊಸದಾಗಿ ಟಿವಿಕೆ ಪಕ್ಷ ಕಟ್ಟಿ 108 ಕ್ಷೇತ್ರಗಳಲ್ಲಿ ಗೆದ್ದು ನಟ ವಿಜಯ್ ಇದೀಗ ಸರ್ಕಾರವನ್ನ ಕಟ್ಟಲು ಹರ ಸಾಹಸ ಪಡುತ್ತಿರುವ ನಟ ವಿಜಯ್ ಅವರಿಗೆ ಯಾವ ಪಕ್ಷ ಕೂಡ ಸರಿಯಾಗಿ ಬೆಂಬಲ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು ತಮಿಳುನಾಡಿನ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬ ಮಾತಿಗೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನ ಯಾವ ಶಾಸಕರು ಕೂಡ ಬೆಂಗಳೂರಿಗೆ ಬಂದಿಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಇಂದು (ಶನಿವಾರ ಮೇ. 09) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬುದು ಸುಳ್ಳು. ನಾನು ಪಕ್ಷ ಹೇಳಿದಂತೆ ಕೇಳುವೆ, ತಮಿಳುನಾಡು ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ತಮಿಳುನಾಡಿನ ಯಾವ ಶಾಸಕರೂ ಈಗಲ್ ಟನ್ ರೆಸಾರ್ಟ್ ಗೆ ಬಂದಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಹಿತಿ ಇದ್ದಿದ್ದರೆ ನಾನು ಹೇಳುತ್ತಿದ್ದೆ. ನವೀಕರಣ ಹಿನ್ನೆಲೆಯಲ್ಲಿ ಈಗಲ್ ಟನ್ ರೆಸಾರ್ಟ್ ಮುಚ್ಚಲಾಗಿದೆ. ಕೆಲವರು ಹೈದರಾಬಾದ್ ಗೆ ಹೋಗಿದ್ದಾರೆ ಎಂದರೆ ಮತ್ತೆ ಕೆಲವರು ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಶ್ರೀಕಿ ಅರೆಸ್ಟ್ ನಲಪಾಡ್ಗೂ ಸಂಕಷ್ಟ!?
ಪಕ್ಷದ ಹೈಕಮಾಂಡ್ ನಾಯಕರು ಏನಾದರೂ ನಿರ್ದೇಶನ ನೀಡಿದರೆ ನಾನು ಅದನ್ನು ಪಾಲಿಸುವೆ. ಆದರೆ ಈವರೆಗೆ ಹೈಕಮಾಂಡ್ ನಾಯಕರು ನನ್ನ ಜೊತೆ ಏನೂ ಮಾತನಾಡಿಲ್ಲ. ಪಕ್ಷದ ನಾಯಕರ ನಿರ್ದೇಶನದಂತೆ ನಾನು ತಮಿಳುನಾಡಿನಲ್ಲಿ ಪ್ರಣಾಳಿಕೆ ಬಿಡುಗಡೆ ಹಾಗೂ ಪ್ರಚಾರಕ್ಕೆ ಹೋಗಿದ್ದೆ. ಅದಾದ ನಂತರ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ತಮಿಳುನಾಡಿನಲ್ಲಿ ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬದಲಾಗುತ್ತಿದೆಯಲ್ಲ ಎಂದಾಗ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
