ಬೆಂಗಳೂರು: ಕರ್ನಾಟಕದ ಉತ್ಪನ್ನವಾದ ನಂದಿನಿ ಉತ್ಪನ್ನಕ್ಕೆ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ಬೇಡಿಕೆ ಹೆಚ್ಚಿರುವುದರಿಂದ ಕರ್ನಾಟಕದ ಹೆಮ್ಮೆ ಮತ್ತಷ್ಟು ಉನ್ನತಕ್ಕೆ ಏರುತಿದೆ.
ಹೌದು, ನಂದಿನಿ ಬ್ರಾಂಡ್ಗಳು ಕೇವಲ ಕರ್ನಾಟಕ ಮಾತ್ರವಲ್ಲದೇ ವಿದೇಶದಲ್ಲೂ ಕೂಡ ಹೆಚ್ಚಿನ ಬೇಡಿಕೆ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಂತೆ ಇದೀಗ ದೈವ ಸೇವೆಗೂ ಕೂಡ ನಂದಿನಿ ತುಪ್ಪ ಪೂರೈಕೆ ಆಗುತ್ತಿರುವುದು ಹೆಮ್ಮೆಯ ಸಂಗತಿ.
ಇನ್ನು ಬೆಂಗಳೂರು ಡೇರಿಯ ಆವರಣದಲ್ಲಿ ಇಂದು (ಬುಧವಾರ ಎಪ್ರಿಲ್ 29) ಬೆಂಗಳೂರು ಸಹಕಾರ ಹಾಲು ಒಕ್ಕೂಟದಿಂದ (ಬಮೂಲ್) ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನಂದಿನಿ ತುಪ್ಪ ಸರಬರಾಜು ಮಾಡುವ ಪವಿತ್ರ ಕಾರ್ಯಕ್ರಮಕ್ಕೆ ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪರಿಶುದ್ಧತೆಗೆ ಮತ್ತೊಂದು ಹೆಸರೇ ನಂದಿನಿ ತುಪ್ಪ. ಈ ತುಪ್ಪವನ್ನು ಇದೀಗ ಶ್ರೀನಿವಾಸನ ನಿತ್ಯ ನೈವೇದ್ಯ ಹಾಗೂ ಪ್ರಸಾದದಲ್ಲಿ ಬಳಸುತ್ತಿರುವುದು ನಮ್ಮ ನಾಡಿನ ಸೌಭಾಗ್ಯ ಹಾಗೂ ಹೆಮ್ಮೆ ಎಂದರು. ಇದನ್ನೂ ಓದಿ: ಸಾರ್ವಜನಿಕ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ: ಶಾಸಕ ಸತೀಶ್ ರೆಡ್ಡಿ
ತಿರುಪತಿ ತಿಮ್ಮಪ್ಪನ ಆಶೀರ್ವಾದ ನಮ್ಮೆಲ್ಲ ರೈತರ ಮೇಲಿರಲಿ, ಅವರ ಹೈನೋದ್ಯಮ ಮತ್ತಷ್ಟು ಏಳಿಗೆಯಾಗಲಿ ಹಾಗೂ ನಮ್ಮ ನಂದಿನಿ ತುಪ್ಪದ ಉತ್ಪಾದನೆಯು ಹೆಚ್ಚಾಗಲಿ ಎಂದು ಆಶಿಸುತ್ತೇನೆ ಎಂದರು.
