ಬೆಂಗಳೂರು: ಮಾನವ–ಪ್ರಾಣಿ ಸಂಘರ್ಷವನ್ನು ತಡೆಯುವ ಜೊತೆಗೆ ಸಹಅಸ್ತಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ (BWCC) ವತಿಯಿಂದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಇಂದು (ಶನಿವಾರ ಏ.25) ಭಾರತೀಯ (ಸ್ಥಳೀಯ) ನಾಯಿ ಮರಿ ದತ್ತು ಸ್ವೀಕಾರ ಮೇಳವನ್ನು ಆಯೋಜಿಸಲಾಯಿತು.
ಈ ವೇಳೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ಸ್ಥಳೀಯ ನಾಯಿಗಳು ಇತರೆ ಜಾತಿಯ ನಾಯಿಗಳಿಗಿಂತ ಹೆಚ್ಚು ಹೊಂದಾಣಿಕೆ ಗುಣವನ್ನು ಹಾಗೂ ರೋಗ ತಡೆ ಸಾಮರ್ಥ್ಯವನ್ನು ಹೊಂದಿದ್ದು, ಸ್ಥಳೀಯ ನಾಯಿಗಳನ್ನು ದತ್ತು ಪಡೆಯುವುದು ಉತ್ತಮ ಎಂದು ತಿಳಿಸಿದರು.
ಇನ್ನುಮುಂದೆ ಸ್ಥಳೀಯ ನಾಯಿಗಳನ್ನು ‘ಭೈರೂವ’ ಎಂದು ಕರೆಯಲು ಕರೆ ನೀಡಿದರು. ಭೈರೂವ ಕುರಿತ ಕಿರುಚಿತ್ರವನ್ನು ಬಿಡುಗಡೆ ಮಾಡಿ, ಅದರ ಹೃದಯಸ್ಪರ್ಶಿ ನಿರೂಪಣೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ 14 ನಾಯಿ ಮರಿಗಳನ್ನು ದತ್ತು ಪಡೆಯಲು ಮುಂದಾದ ಪೋಷಕರನ್ನು, ಈಗಾಗಲೇ 35ಕ್ಕೂ ಹೆಚ್ಚು ನಾಯಿಗಳನ್ನು ದತ್ತು ಪಡೆದ 18 ಪೋಷಕರನ್ನು ಹಾಗೂ 300ಕ್ಕೂ ಹೆಚ್ಚು ನಾಯಿಗಳನ್ನು ದತ್ತು ಪಡೆಯಲು ಪ್ರೋತ್ಸಾಹಿಸಿದ 3 ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು. ಆಯುಕ್ತರು ಸ್ವತಃ ನಾಯಿ ದತ್ತು ಪಡೆದಿರುವುದನ್ನು ಉಲ್ಲೇಖಿಸಿ, ನಾಯಿ ಪೋಷಕರ ಮಾನವೀಯತೆಯನ್ನು ಶ್ಲಾಘಿಸಿದರು.
ವಿಶ್ವ ಪಶುವೈದ್ಯರ ದಿನಾಚರಣೆ
ವಿಶ್ವ ಪಶುವೈದ್ಯರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು, ಪಶ್ಚಿಮ ಪಾಲಿಕೆ ಸೇರಿದಂತೆ ಇನ್ನೂ ನಾಲ್ಕು ಪಾಲಿಕೆಗಳ ಪಶುವೈದ್ಯರು ಸೇರಿ ಹಾಜರಿದ್ದ ಎಲ್ಲಾ ನಾಯಿಗಳಿಗೆ ರೇಬಿಸ್ ಹಾಗೂ ಸಂಯುಕ್ತ ಲಸಿಕೆ ನೀಡಿದರು. ಇದನ್ನೂ ಓದಿ: 9ನೇ ರಾಜ್ಯ ಸಮ್ಮೇಳನ ಯಶಸ್ವಿಗೆ ಸಹಕರಿಸಿ
ನಾಯಿ ಬೋನುಗಳ ಬಳಕೆ
ವಿಶಾಲ ಪ್ರದೇಶಗಳಲ್ಲಿ ಸುರಕ್ಷಿತವಾಗಿ ನಾಯಿಗಳನ್ನು ಹಿಡಿಯಲು ಟ್ರಾಪ್ ಕೇಜ್ (ನಾಯಿ ಬೋನು)ಗಳ ಮಹತ್ವವನ್ನು ಮನಗಂಡು, ಪಶ್ಚಿಮ ಪಾಲಿಕೆ ವಿಶೇಷ ಕ್ರಮವಾಗಿ ಈ ವ್ಯವಸ್ಥೆಯನ್ನು ಪ್ರಾರಂಭಿಸಿತು.
ಮೇಳದಲ್ಲಿ ಆರೋಗ್ಯ ಇಲಾಖೆಯ ಮುಖ್ಯಸ್ಥರಾದ ಡಾ: ಮನೋರಂಜನೆ ಹೆಗ್ಡೆ, ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ: ಚಂದ್ರಯ್ಯ, ಸ್ಥಳೀಯ ನಿವಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ್, ಮುಖ್ಯ ಪಶುವೈದ್ಯಾಧಿಕಾರಿ ಡಾ: ವೆಂಕಟೇಶ್ ಹಾಗೂ ಡಾ. ಶ್ರೀರಂಗರಾಜು ಉಪಸ್ಥಿತರಿದ್ದರು.
