ಬಹಿರ್ದೆಸೆಗೆ ಹೋದ ಬಾಲಕಿ ಮೇಲೆ ಗ್ಯಾಂಗ್ ರೆಪ್ ಗೆ ಯತ್ನ
ಶಹಾಪುರ: ತಾಲೂಕಿನ ಶಾರದಳ್ಳಿ ಗ್ರಾಮದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಅಪ್ರಾಪ್ತ ಬಾಲಕಿ ಕೈಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿ ಕಾಲುವೆ ಪಕ್ಕ ಬಾಲಕಿಯನ್ನು ಎಸೆದು ಹೋದ ಘಟನೆ ಇಡೀ ಜಿಲ್ಲೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ.
ಅಪ್ರಾಪ್ತ ಬಾಲಕಿಯೂ ಇಂದು (ರವಿವಾರ ಏ. 19) ಬೆಳಗಿನ ಜಾವಾ 4 ಗಂಟೆ ಸುಮಾರಿಗೆ ಬಹಿರ್ದೆಸೆಗೆ ಹೋಗಿದ್ದ ವೇಳೆ ಕೃತ್ಯಕ್ಕೆ ಯತ್ನ ನಡೆದಿದೆ. ಬಾಲಕಿಯ ಮೈಮೇಲೆ ಇದ್ದ ಒಡನಿಯಿಂದಲೇ ಕೈಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಯಾವುದೊ ವಾಹನ ಬಂದ ಮೇಲೆ ಬಾಲಕಿಯನ್ನು ಬಿಟ್ಟು ಕಾಲುವೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ನಂತರ 8 ಗಂಟೆ ಸುಮಾರಿಗೆ ಗ್ರಾಮಸ್ಥರು ನೋಡಿ ಪೋಷಕರಿಗೆ ತಿಳಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವಿನ ಪರಿಸ್ಥಿತಿ ನೋಡಿದ ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಶಹಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ ಪಿ ಭೇಟಿ
ಎಸ್ ಪಿ ಪೃತ್ವಿಕ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸಿಡಿಪಿಒ ನಿರ್ಲಕ್ಷ್ಯ
ಬಾಲಕಿ ಮೇಲಿನ ಗ್ಯಾಂಗ್ ರೇಪ್ ಗೆ ಕುರಿತು ಇಡೀ ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಇರಲಿಲ್ಲ. ಇಂತ ಘಟನೆಯ ಸೂಕ್ಷ್ಮತೆ ಅರಿತುಕೊಳ್ಳಬೇಕಾದ ಅಧಿಕಾರಿಗಳ ವರ್ಗದವರು ಸುಮ್ಮನಾಗಿದ್ದು ಅನುಮಾನಾಕ್ಕಿಡು ಮಾಡುತ್ತಿದೆ. ಬಾಲಕಿ ಸದ್ಯ ಚೇತರಿಸಿಕೊಳ್ಳುತ್ತಿದ್ದು, ತಂದೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಅವರ ಹೇಳಿಕೆ ಪಡೆದುಕೊಳ್ಳಲಾಗಿದೆ. ವೈದ್ಯಕೀಯ ಪರೀಕ್ಷಾ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಪಿಐ ಎಸ್. ಎಂ ಪಾಟೀಲ್ ಶಹಾಪುರ ತಿಳಿಸಿದ್ದಾರೆ.
ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗಿದೆ
ಜಿಲ್ಲೆಯದ್ಯಂತ ಸ್ತ್ರೀಪೀಡಕರು, ದುರುಳರು, ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗಿದೆ. ಸರಣಿ ರೂಪದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಈ ಪ್ರಕರಣದಲ್ಲಿ ಯಾರೇ ಇದ್ದರು ಸಹ ಅವರನ್ನು ಬಂಧಿಸಿ ಗಲ್ಲುಶಿಕ್ಷೆಗೆ ಗುರಿಪಡಿಸಬೇಕು. ಅಂದಾಗ ಇದು ಎಚ್ಚರಿಕೆ ಗಂಟೆ ಆಗಲಿದೆ. ಪೊಲೀಸರೂ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆರೋಪಿಗಳನ್ನು ಬಂದಿಸಬೇಕು ಎಂದು ಯುವ ಮುಖಂಡರು ರಾಯಪ್ಪ ಚಲುವಾದಿ ಹೇಳಿದರು.
