ಬೆಂಗಳೂರು: ತರಾತುರಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲು ಹೋದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. ಇದು ಇಂಡಿಯಾ ಒಕ್ಕೂಟದ ಜಯವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ನಗರದಲ್ಲಿ ಇಂದು ಭಾನುವಾರ ಏಪ್ರಿಲ್ 19ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಹಾಗೂ ಕ್ಷೇತ್ರ ವಿಂಗಡಣೆ ವಿರುದ್ದ ಪ್ರತಿಭಟಿಸಿದ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳ ಹೋರಾಟಕ್ಕೆ, ಪ್ರಜಾಪ್ರಭುತ್ವಕ್ಕೆ ಸಿಕ್ಕಂತಹ ದೊಡ್ಡ ಜಯ. ಮಹಿಳೆಯರ ಪರವಾಗಿ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಒಕ್ಕೂಟ ನಿಂತಿದೆ. ಇಲ್ಲಿ ಯಾರಿಗೂ ಅವಮಾನವಾಗಿಲ್ಲ ಎಂದರು.
ಸಂವಿಧಾನ ತಿದ್ದುಪಡಿ ಮಾಡುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಮಹಿಳಾ ಮೀಸಲಾತಿ ಕಾಯ್ದೆ ಕಾಂಗ್ರೆಸ್ ಪಕ್ಷದ ಕನಸು ಮತ್ತು ಕೂಸು. ಇದರ ಪರವಾಗಿ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಈಗ ಬಿಜೆಪಿ ಸರ್ಕಾರ ಮಾಡಿರುವ ನಿರ್ಧಾರ ಸರಿಯಾದ ಸಮಯವಲ್ಲ. ನಮ್ಮದು ಹಿಟ್ಲರ್ ಆಡಳಿತವಲ್ಲಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಜೊತೆ ಚರ್ಚೆ ನಡೆಸಬೇಕಿತ್ತು. ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ತರುವ ಪ್ರಮೇಯವೇನಿತ್ತು. ಇಂಡಿಯಾ ಒಕ್ಕೂಟದ ಎಲ್ಲಾ ಸದಸ್ಯರಿಗೆ ನಾನು ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು.
