ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಹಿರಿಯ ಶಾಸಕರು ತಮಗೂ ಕೂಡ ಮಂತ್ರಿಗಿರಿ ಪಟ್ಟಬೇಕು ಎಂದು ಈಗಾಗಲೇ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಲು ಸಮಯ ನಿಗದೆ ಆಗಿದ್ದು ಇಂದು (ಸೋಮವಾರ ಏಪ್ರಿಲ್ 13) ಸಂಜೆ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಇನ್ನು ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ವಿಚಾರ ಇರಲಿ, ಪುನಾರಚನೆ ಇರಲಿ ಹೈಕಮಾಂಡ್ ಮಾತ್ರವೇ ತೀರ್ಮಾನ ಮಾಡಬೇಕು. ಹೈಕಮಾಂಡ್ ಎಲ್ಲ ಗಮನಿಸಿದೆ, ಅವರಿಗೆ ಎಲ್ಲ ಗೊತ್ತಿದೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಅಂತ ಹೈಕಮಾಂಡ್ಗೆ ಗೊತ್ತಿದೆ, ಅವರು ಮಾಡ್ತಾರೆ ಎಂದಿದ್ದಾರೆ.
ರಾಜ್ಯದಲ್ಲಿ ಕೇವಲ ಈಗ ಪುನಾರಚನೆ ಚರ್ಚೆ ಆಗುತ್ತಿದೆ ಅಷ್ಟೇ. ಅಧ್ಯಕ್ಷ ಸ್ಥಾನ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು. ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅನೇಕರಿಂದ ಮಾಹಿತಿ ಪಡೆದು ಹೈಕಮಾಂಡ್ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ‘ಸಿದ್ದರಾಮಯ್ಯ ಸೇತುವೆ’ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಏನಾದ್ರೂ ಬದಲಾವಣೆ ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಿದ್ರೆ ಅದಕ್ಕೆ ನಾವು ಒಪ್ಪಲೇಬೇಕು. ಒಪ್ಪೋದಿಲ್ಲ ಅನ್ನೋ ಪ್ರಶ್ನೆಯೇ ಬರಲ್ಲ. ನಾನಾಗಲೀ, ರಾಮಲಿಂಗಾರೆಡ್ಡಿ ಆಗಲೀ, ಜಾರ್ಜ್ ಆಗಲೀ ನಾವೆಲ್ಲ ಸೀನಿಯರ್ಸ್ ಇದ್ದೀವಿ. ನಮ್ಮನ್ನು ನೀವು ಬದಲಾಯಿಸಿಕೊಳ್ಳಬೇಕು ಅಂತ ಅವ್ರು ತೀರ್ಮಾನ ಮಾಡಿದ್ರೆ ಆಗ ನಾವು ಪ್ರಶ್ನೆ ಮಾಡಲು ಬರೋದೇ ಇಲ್ಲ ಎಂದು ಹೇಳಿದ್ದಾರೆ.
