ಬೆಂಗಳೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಶ್ರೀಮತಿ ಬಾನು ಮುಷ್ತಾಕ್ ಅವರ ವಿರುದ್ಧ ಸರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಫೋಟೊಗೆ ಪುಷ್ಪಾರ್ಚನೆ ಮಾಡಿದ್ದನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ ಎಂದರು. ಸರಕಾರ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನನ್ನ ಪ್ರಕಾರ ಬಾನು ಮುಷ್ತಾಕ್ ಅವರು ಅಲ್ಲಾಹರನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರಿಗೂ ಅಪಮಾನ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಬಾನು ಮುಷ್ತಾಕ್ ಅವರು ಯಾರು ಅಂಬೇಡ್ಕರ್ ಅವರನ್ನು ದೇವರೆಂದು ನಂಬಿದ್ದಾರೋ ಅವರಿಗೆ ಅಪಮಾನ ಮಾಡಿದ್ದಾರೆ. ಹಿಂದೂಗಳಿಗೆ ಮತ್ತು ಮುಸಲ್ಮಾನರಿಗೆ ಅಪಮಾನ ಮಾಡಿದ ಅವರ ದುರಹಂಕಾರಕ್ಕೆ ನನ್ನ ಧಿಕ್ಕಾರವಿದೆ ಎಂದು ತಿಳಿಸಿದರು. ನಾವು ಅವರನ್ನು ದಸರಾ ಉದ್ಘಾಟನೆಗೆ ಕರೆದಾಗ ಹಲವರು ವಿರೋಧ ಮಾಡಿದ್ದರು. ಅವರು ಕನ್ನಡದ ವಿರೋಧಿ ಎಂದು ವಿರೋಧಿಸಿದ್ದರು. ಅಂಥ ಸಮಯದಲ್ಲಿ ರಾಜ್ಯದಲ್ಲಿರುವ ಅನೇಕ ದಲಿತ ಸಂಘಟನೆಗಳು, ದಲಿತ ಹೋರಾಟಗಾರರು ಅವರಿಗೆ ಸಹಕಾರಕ್ಕೆ ನಿಂತಿದ್ದರು. ಈಗ ಆ ದಲಿತ ಸಂಘಟನೆಗಳ ಮುಖಂಡರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ದೇವರೆಂದು ನಂಬಿರುವ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಈ ರೀತಿ ಅಪಮಾನ ಮಾಡಿದ್ದರಿಂದ ಇನ್ನು ಮುಂದೆ ಇಡೀ ರಾಜ್ಯದಲ್ಲಿ ದಲಿತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು, ಬಾನು ಮುಷ್ತಾಕ್ ಅವರಿಗೆ ಅವರ ಮನೆದೇವರಿಂದಲೇ ಅವರ ಪೂಜೆ ಮಾಡಬೇಕು; ಅವರಿಗೆ ಚಪ್ಪಲಿಯಿಂದಲೇ ಪೂಜೆ ಮಾಡಬೇಕು. ಅದವರ ಮನೆದೇವರಾದ ಕಾರಣ ಅದನ್ನು ಅವರು ವಿರೋಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಅವರು ಎಲ್ಲಿಗೇ ಬಂದರೂ ದಲಿತ ಸಂಘಟನೆಗಳು, ಹಿಂದೂಗಳು, ಇಸ್ಲಾಂ ಸಮುದಾಯದವರು ಅವರಿಗೆ ಛೀಮಾರಿ ಹಾಕಬೇಕು ಎಂದು ವಿನಂತಿಸಿದರು. ಇದನ್ನೂ ಓದಿ: ತಾಲ್ಲೂಕಿನ ಜನರಿಗೆ ಆಶಾಕಿರಣವಾದ ಶಾಸಕ ಬಸವರಾಜ ರಾಯರೆಡ್ಡಿ
ಇಸ್ಲಾಮಿನ ಅಥವಾ ಮುಸಲ್ಮಾನರ ದೇವರು ಅಲ್ಲಾಹ ಎಂಬುದು ಈ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಆ ಕಾರಣಕ್ಕೆ ಇಸ್ಲಾಂ ಬಂಧುಗಳು ಅಲ್ಲಾಹನನ್ನು ಪ್ರಾರ್ಥಿಸುವವರು, ಅದಕ್ಕೆ ನಾವು ಕೂಡ ಅದನ್ನು ಗೌರವಿಸುತ್ತೇವೆ ಎಂದು ತಿಳಿಸಿದರು. ಆದರೆ, ಬಾನು ಮುಷ್ತಾಕ್ ಅವರು ಚಪ್ಪಲಿ ನನ್ನ ಮನೆದೇವರು; ಆದ್ದರಿಂದ ನಾನು ಚಪ್ಪಲಿ ಧರಿಸಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳಿ ಅವರ ನಡೆಯನ್ನು ಮತ್ತೊಮ್ಮೆ ಉದ್ಧಟತನದಿಂದ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಅವರು ಕ್ಷಮೆಗೆ ಅರ್ಹರಲ್ಲ ಎಂದರು.
