ಸಾಥಖೇಡ ಗ್ರಾ.ಪಂ ಎದುರು ಕೂಲಿ ಕಾರ್ಮಿಕರು ಮಹಿಳೆಯರಿಂದ ಪ್ರತಿಭಟನೆ
ಶಹಾಪುರ (ಯಡ್ರಾಮಿ): ನರೇಗಾ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಅಡಿಯಲ್ಲಿ ಮಾನವ ದಿನಗಳ ಆಧಾರದ ಮೇಲೆ ಕೂಲಿ ಕೆಲಸ ಕೊಡದಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕ ಅಧ್ಯಕ್ಷ ಶಶಿಕುಮಾರ ಗೇಜ್ಜೆ ಮಾತನಾಡಿ, ತಾಲೂಕಿನ ಸಾಥಖೇಡ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಪಡಗದಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿಸುತ್ತಿದ್ದಾರೆ. ಅನುದಾನದ ಲೆಕ್ಕ ತೋರಿಸಿ ಯಾವುದೇ ಕೆಲಸ ಮಾಡದೇ ಸರ್ಕಾರದ ಹಣ ಲೂಟಿ ಹೊಡೆಯುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಕೂಲಿ ಕೆಲಸ ಇಲ್ಲದೇ ಅನ್ನದಾತರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದು, ಇದುವರೆಗೂ ಕೆಲಸ ಕೊಡದೆ ಕೂಲಿ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಹಾರಿಕೆ ಉತ್ತರ ನೀಡುವ ಅಧಿಕಾರಿಗಳ ನಡೆ ಬೇಸರ ತಂದಿದ್ದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.
ಸರ್ಕಾರ ಬಡವರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ನರೇಗಾ, ಉದ್ಯೋಗ ಖಾತ್ರಿ ಯೋಜನೆಗಳನ್ನು ಜಾರಿ ಮಾಡಿ ಕೂಲಿ ಕೆಲಸ ನೀಡಿ ಆಸರೆಯಾಗುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಯೋಜನೆಗಳು ಸರಿಯಾಗಿ ಬಡಿವರಿಗೆ ತಲುಪುತ್ತಿಲ್ಲ.
ಬಡತನದಲ್ಲಿರುವ ಕುಟುಂಬಗಳು ಕೆಲಸ ಇಲ್ಲದೇ ದೂರದ ಬೆಂಗಳೂರು, ಪುಣೆ, ಬಾಂಬೆಗಳಿಗೆ ಹೋಗಿ ದುಡಿಯುವ ಸ್ಥೀತಿ ಇದ್ದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಬೇಕು. ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ನಿಮ್ಮ ಜಮೀನಿಗೆ ಹಕ್ಕು ಪತ್ರ ಇಲ್ವಾ? ಹಾಗಾದ್ರೆ ಚಿಂತೆ ಬಿಡಿ ಇನ್ಮುಂದೆ ಸರ್ಕಾರನೇ ನಿಮ್ಮನೆ ಬಾಗಿಲಿಗೆ ಬರುತ್ತೆ!
ಈ ಸಂದರ್ಭದಲ್ಲಿ ಪರಶುರಾಮ ಹೊಸ್ಮನಿ, ಮಲ್ಲನಗೌಡ ಮಾಲಿ ಪಾಟೀಲ್, ಭೀಮರಾಯ ಗೋಗಿ, ಶಿವು ಗೋಗಿ, ಬಸಪ್ಪ ಹೊಸ್ಮನಿ, ಶರಣು, ಗುರಪ್ಪ ಬಡಿಗೇರ, ಅಂಬ್ರೇಶ, ದೇವಪ್ಪ, ಈಶನಗೌಡ ಪೊ.ಪಾಟೀಲ್, ಕಾಶಯ್ಯ ಸ್ವಾಮಿ, ಮಹಾಂತೇಶ ಬಡಿಗೇರ, ಭಗವಾನ್, ನಿಂಗು ಸೇರಿದಂತೆ ಕೂಲಿ ಕಾರ್ಮಿಕರು, ಮಹಿಳೆಯರು, ರೈತರು ಇದ್ದರು.
