ಚಿಕ್ಕಬಳ್ಳಾಪುರ: ಕೆಪಿಸಿಸಿ ವತಿಯಿಂದ ಆಯೋಜಿಸಲಾದ “ಮನರೇಗಾ ಉಳಿಸಿ ಆಂದೋಲನ” ಕಾರ್ಯಕ್ರಮದಲ್ಲಿ ಆಹಾರ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆಹೆಚ್. ಮುನಿಯಪ್ಪ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2005-06ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ, ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಹಾಗೂ ಅಂದಿನ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ನೇತೃತ್ವದಲ್ಲಿ ಮಹತ್ವದ ಯೋಜನೆಗಳು ಜಾರಿಗೆ ಬಂದವು ಎಂದು ಸ್ಮರಿಸಿದರು.
ಮನರೇಗಾ, ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ ಹಾಗೂ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಗಳಂತಹ ಕಾರ್ಯಕ್ರಮಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಬದುಕಿನ ಭದ್ರತೆ ನೀಡಿದವು. ಹಸಿವು ನಿರ್ಮೂಲನೆಗೆ ಮಹತ್ತರ ಕೊಡುಗೆ ನೀಡಿದವು, ಎಂದು ಹೇಳಿದರು.
ಯುಪಿಎ ಸರ್ಕಾರ ರೈತರ ಸಾಲಮನ್ನಾ ಸೇರಿದಂತೆ ಜನಪರ ಕಾರ್ಯಕ್ರಮಗಳ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಯಾವುದೇ ಮಹತ್ವದ ಹೊಸ ಯೋಜನೆಯನ್ನು ರೂಪಿಸಿಲ್ಲ, ಎಂದು ಆರೋಪಿಸಿದರು. ಇದನ್ನೂ ಓದಿ: ಭಾರತ್ ಜೊಡೊ ಯಾತ್ರೆ ಯಂತೆ ಮನರೇಗ ಉಳಿಸಲು “ದೇಶವ್ಯಾಪಿ ಯಾತ್ರೆ ಅಗತ್ಯ ಸಚಿವ ಮುನಿಯಪ್ಪ
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಮನವಿ ಮಾಡಿದ ಮುನಿಯಪ್ಪನವರು, ಕರ್ನಾಟಕದಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯಂತೆಯೇ, ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳವಾದ ಪೊರಂಬದೂರ್ ನ ನಿಂದ ದೇಶವ್ಯಾಪಿ ಯಾತ್ರೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಯಾತ್ರೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಸಿ, ಮನರೇಗಾ ಮತ್ತು ಆಹಾರ ಭದ್ರತಾ ಯೋಜನೆಗಳ ಮಹತ್ವವನ್ನು ಜನತೆಗೆ ತಲುಪಿಸಬೇಕು. ದೇಶದ 60-70% ಜನಸಂಖ್ಯೆ ಈ ಯೋಜನೆಗಳ ಮೇಲೆ ಅವಲಂಬಿತವಾಗಿದೆ. ರೈತರು ಮತ್ತು ಬಡವರ ರಕ್ಷಣೆಗೆ ಕಾಂಗ್ರೆಸ್ ಪಕ್ಷವು ರಾಷ್ಟ್ರವ್ಯಾಪಿ ಹೋರಾಟ ರೂಪಿಸಬೇಕು, ಎಂದು ಹೇಳಿದರು.
