ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಮೂಡಿ ಬರುತ್ತಿರುವ ಚಿತ್ರಗಳು ಫ್ಯಾನ್ ಇಂಡಿಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕೇವಲ ನಮ್ಮ ರಾಜ್ಯ, ದೇಶ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಕನ್ನಡದ ಚಿತ್ರಗಳು ಹೆಸರು ಮಾಡುತ್ತಿವೆ. ಆದರೂ ಕೂಡ ಪ್ರೇಕ್ಷಕರು ಥಿಯೇಟರ್ ಗೆ ಬಂದು ಸಿನಿಮಾ ನೋಡಲು ಹಿಂದೆಟು ಹಾಕುತ್ತಾರೆ ಕೇವಲ ಮೊಬೈಲ್ ನಲ್ಲಿಯೇ ನೋಡಿ ಸಮಯ ಕಳೆಯುತ್ತಾರೆ ಎಂದು ಕನ್ನಡ ಚಿತ್ರರಂಗ ನಟ ವಿ ರವಿಚಂದ್ರನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ದಿ ರೈಸ್ ಆಫ್ ಅಶೋಕ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಪ್ರೇಕ್ಷಕ 100 ರೂಪಾಯಿ ಕೊಟ್ಟು ಸಿನಿಮಾ ನೋಡೋಕೆ ಆಗೋದಿಲ್ವಾ? ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಏನೂ ಹೋಗೋದಿಲ್ಲ. 100 ರೂಪಾಯಿ ಮಾತ್ರ ಹೋಗುತ್ತದೆ. ಅದರಿಂದ ನಿಮ್ದೇನೂ ಗಂಟು ಹೋಗೋದಿಲ್ಲ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ನಿಂದ ಪವಿತ್ರಾಗೆ ಮತ್ತೆ ನಿರಾಸೆ
ಎಲ್ಲರೂ ಮೊಬೈಲ್ನಲ್ಲಿ ಲೈಕ್ಸ್, ಕಾಮೆಂಟ್ಸ್ ಅಂತಲೇ ಕಳೆಯುತ್ತೀರಿ. ಅದನ್ನು ಬಿಟ್ಟು ಹೊರಗೆ ಬನ್ನಿ. ಥಿಯೇಟರ್ಗೆ ಬಂದು ಸಿನಿಮಾ ನೋಡಿ. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡುತ್ತಾರೆ. ಒಂದು ಸಿನಿಮಾನ ಗೆಲ್ಲಿಸಿ ಎಂದು ತಮ್ಮದೇ ಶೈಲಿಯಲ್ಲಿ ರವಿಚಂದ್ರನ್ ಮನವಿ ಮಾಡಿದ್ದಾರೆ.
ಫೆಬ್ರವರಿ 27ರಂದು ‘ದಿ ರೈಸ್ ಆಫ್ ಅಶೋಕ’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸತೀಶ್ ನೀನಾಸಂ ನಾಯಕನಾಗಿ ನಟಿಸಿದ್ದಾರೆ. ಚಿತ್ರಕ್ಕೆ ಅವರು ಹೂಡಿಕೆಯೂ ಮಾಡಿದ್ದಾರೆ. ವಿನೋದ್ ವಿ ಧೊಂಡಾಲೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
