ಬೆಂಗಳೂರು: ದಕ್ಷಿಣ ಕಾಶಿ ಖ್ಯಾತಿಯ ಹುಳಿಮಾವು ಶ್ರೀ ಸ್ಫೂರ್ತಿ ವಿನಾಯಕ ಸಹಿತ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದ 21ನೇ ವರ್ಷದ ವಾರ್ಷಿಕೋತ್ಸವ ಹಾಗೂ 20ನೇ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಇದೇ ಫೆಬ್ರವರಿ 22ರಿಂದ ಮಾರ್ಚ್ 2ರವರೆಗೆ ನಡೆಯಲಿದ್ದು, ಈ ಮಹೋತ್ಸವದ ಪ್ರಯುಕ್ತ ದೇವಸ್ಥಾನದ ಟ್ರಸ್ಟಿ ವೇಣುಗೋಪಾಲ ಹಾಗೂ ಸಂಗಡಿಗರು ಇಂದು (ಬುಧವಾರ ಫೆಬ್ರವರಿ 11) ರಂದು ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ, ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸಬೇಕೆಂದು ಆತ್ಮೀಯ ಆಹ್ವಾನ ನೀಡಿದರು.
ದೇವಾಲಯದಲ್ಲಿ ಪಾಂಚರಾತ್ರ ಆಗಮೋಕ್ತ ವಿಧಾನದಲ್ಲಿ ನವದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು, ಬ್ರಹ್ಮರಥೋತ್ಸವ, ವಾಹನೋತ್ಸವಗಳು ಹಾಗೂ ದಿವ್ಯ ಕಲ್ಯಾಣೋತ್ಸವ ಸೇರಿದಂತೆ ವೈಭವಮಯ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಭಕ್ತಾದಿಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಟ್ರಸ್ಟಿ ವೇಣುಗೋಪಾಲರು ಮಾತನಾಡಿ, “ಹುಳಿಮಾವು ಕ್ಷೇತ್ರದ ಆಧ್ಯಾತ್ಮಿಕ ಪರಂಪರೆ ಹಾಗೂ ಬ್ರಹ್ಮರಥೋತ್ಸವದ ವೈಭವವನ್ನು ರಾಜ್ಯದ ಜನತೆಗೂ ಪರಿಚಯಿಸುವ ಉದ್ದೇಶದಿಂದ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ” ಎಂದು ತಿಳಿಸಿದರು. ಇದನ್ನೂ ಓದಿ: ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಗುರಿ: ಡಿ.ಕೆ. ಸುರೇಶ್
ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಸತ್ಯನಾರಾಯಣ ಸ್ವಾಮಿಯವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ವತಿಯಿಂದ ಭಕ್ತರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
