ಬೆಂಗಳೂರು: ಕಳ್ಳರು, ಕಳ್ಳತನ ಮಾಡಲು ಸಾಮಾನ್ಯವಾಗಿ ಶ್ರೀಮಂತರ ಮನೆ ಹಾಗೂ ಚಿನ್ನದ ಅಂಗಡಿ ಸೇರಿದಂತೆ ಇನ್ನೂ ಹಲವು ಜಾಗಗಳಲ್ಲಿ ಕಳ್ಳತನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಹೆಚ್ಚಿನ ಭದ್ರತೆ ಇರುವಂತಹ ಸ್ಥಳಗಳಲ್ಲಿ ಒಂದಾದ ವಿಧಾನಸೌಧದಲ್ಲಿಯೇ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಸಚಿವ ಭೈರತಿ ಸುರೇಶ್ ಅವರ ಕಚೇರಿಯಲಿ ಸುಮಾರು ಚಿನ್ನಾಭರಣ ಹಾಗೂ 1.50 ಲಕ್ಷ ರೂ. ನಗದು ಹೊಂದಿದ್ದ ಕೈಚೀಲ ಕಳವಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ. ಗ್ರೂಪ್ ನೌಕರನನ್ನು ವಿಧಾನಸೌಧದ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವರ ಕಚೇರಿಗೆ ಆಗಮಿಸಿದ್ದ ವೇಳೆ, ತಮ್ಮ ಕೈಚೀಲವನ್ನು ಕಚೇರಿಯಲ್ಲೇ ಮರೆತು ಹೊರಟಿದ್ದರು. ಆ ಕೈಚೀಲದಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣ ಮತ್ತು 1.50 ಲಕ್ಷ ರೂ. ನಗದು ಇತ್ತು. ಮಾರನೇ ದಿನ ಕಚೇರಿಗೆ ಬಂದು ಪರಿಶೀಲಿಸಿದಾಗ ಕೈಚೀಲ ಕಾಣೆಯಾಗಿರುವುದು ಗೊತ್ತಾಗಿದೆ.
ತಕ್ಷಣವೇ ಗಾಬರಿಗೊಂಡ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ, ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ತೆಗೆದುಕೊಂಡು ಹೋಗಿರುವುದು ದೃಢಪಟ್ಟಿದೆ. ಇದನ್ನೂ ಓದಿ: KSDL ಬ್ರ್ಯಾಂಡ್ ಗೆ ಇಂದಿನಿಂದ ನಟಿ ತಮನ್ನಾ ರಾಯಭಾರಿ
ಈ ಮಾಹಿತಿ ಆಧರಿಸಿ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಡಿ ಗ್ರೂಪ್ ನೌಕರನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮುಂದುವರಿದಿದೆ.
