ಬೆಂಗಳೂರು: 6 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಅಬಕಾರಿ ಹಗರಣದ ಸಮರ್ಪಕ ತನಿಖೆ ಆಗಲೇಬೇಕು. ಹೈಕೋರ್ಟಿನ ಹಾಲಿ ನ್ಯಾಯಾಧೀಶರು ಅಥವಾ ಸಿಬಿಐನಿಂದ ಇದರ ತನಿಖೆ ಆಗಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ, ದುಷ್ಟ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದರಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ನಾಯಕರಾದ ಸುರೇಶ್ ಬಾಬು, ಭೋಜೇಗೌಡರು ಸೇರಿ ಎರಡೂ ಪಕ್ಷಗಳ ಶಾಸಕರು, ವಿಧಾನಪರಿಷತ್ ಸದಸ್ಯರು ಎಲ್ಲರೂ ಇದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಗೂಂಡಾಗಳು ಸದನದಲ್ಲಿ ಮಾನ್ಯ ರಾಜ್ಯಪಾಲರ ಜೊತೆ ಗೂಂಡಾ ವರ್ತನೆ ತೋರಿದ್ದನ್ನು ದೇಶದ ಜನರು ನೋಡಿದ್ದಾರೆ ಎಂದು ತಿಳಿಸಿದರು.
ಅಬಕಾರಿ ಹಗರಣದಲ್ಲಿ ಸ್ವತಃ ಅಬಕಾರಿ ಸಚಿವರ ಹೆಸರು ಕೇಳಿಬರುತ್ತಿದೆ. ಅಬಕಾರಿ ಸಚಿವರ ಕುಟುಂಬದ ಸದಸ್ಯರ ಹೆಸರು ಕೇಳಿಬರುತ್ತಿದೆ. ಅದರ ನಡುವೆಯೂ ಮುಖ್ಯಮಂತ್ರಿಗಳು ಸದನದಲ್ಲಿ ಚರ್ಚೆ ಮಾಡಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಗ್ರಾಮ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರುದ: ಡಿಸಿಎಂ
ರಾಜ್ಯ ಸರ್ಕಾರ ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಮುಂದಾಗಿದೆ. ಇದನ್ನು ನಾನು ಪದೇಪದೇ ಹೇಳುತ್ತಿದ್ದೇನೆ. ಗ್ರಾಮೀಣ ಭಾಗದ ದಿನಸಿ ಅಂಗಡಿಯಲ್ಲಿ ಸಹ ಹೆಂಡ ಮಾರಾಟ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರು ತಮ್ಮ ಬೊಕ್ಕಸಕ್ಕೆ ಹಣ ತುಂಬಿಸಿಕೊಳ್ಳಲು ಹಾಗೂ ಗ್ಯಾರಂಟಿಗಳಿಗಾಗಿ ಹಣ ತುಂಬಿಸಿಕೊಳ್ಳಲು ಕಳೆದ ಎರಡೂವರೆ ವರ್ಷಗಳಲ್ಲಿ ಶೇ 35 ರಷ್ಟು ಗುರಿ ಹೆಚ್ಚಿಸಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಆ ಸ್ಥಾನಕ್ಕೆ ಬರಲು ಕೋಟಿ ಕೋಟಿ ಲಂಚ ಇರದೇ ಸಾಧ್ಯವಿಲ್ಲವಾಗಿದೆ ಎಂದು ಆರೋಪಿಸಿದರು.
