ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋಗೆ ಚಾಲನೆ ನೀಡಲಾಗಿದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು 219ನೆಯ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಹೌದು, ಜನವರಿ 26 ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನಲ್ಲಿರುವ ಲಾಲ್ ಬಾಗ್ ನಲ್ಲಿ ಪ್ರತಿ ವರ್ಷವೂ ಕೂಡ ಫ್ಲವರ್ ಶೋ ಏರ್ಪಡಿಸಲಾಗುತ್ತದೆ. ಅದರಂತೆ ಈ ವರ್ಷವೂ ಕೂಡ ವಿಭಿನ್ನ ಮಾದರಿಯಲ್ಲಿ ಫ್ಲವರ್ ಶೋ ಏರ್ಪಾಟು ಮಾಡಲಾಗಿದೆ.
ನಂತರ ಮಾತನಾಡಿದ ಅವರು, ಬೆಂಗಳೂರು ಉದ್ಯಾನ ನಗರಿ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿದೆ. ಹೀಗಾಗಿ ಈ ಉದ್ಯಾನಗಳ ನಿರ್ಮಾಣಕ್ಕೆ ಜಿಬಿಎ, ಪಾಲಿಕೆ ವತಿಯಿಂದ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದೇನೆ. ನಾನು ನಗರದ ಪಾರ್ಕ್ ಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ನೋಡಿ, ಜನರ ಅಭಿಪ್ರಾಯ ಪಡೆದು ಅನೇಕ ಅಭಿವೃದ್ಧಿ ಕೆಲಸ ಕೈಗೊಳ್ಳಲು ಸೂಚಿಸಿದ್ದೇನೆ. ನಮ್ಮ ರಾಜ್ಯದಿಂದ ಹೊರ ದೇಶಗಳಿಗೆ ಪ್ರತಿ ವಾರ 17 ವಿಮಾನದಷ್ಟು ಹೂ, ತರಕಾರಿ ರಫ್ತಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಹೂ, ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಇಂದು ಬೆಂಗಳೂರಿನ ಲಾಲ್ ಬಾಗ್ ನಲ್ಲಿ 219ನೇ ಫಲಪುಷ್ಟ ಪ್ರದರ್ಶನವನ್ನು ಉದ್ಘಾಟಿಸಲಾಗಿದೆ. ಇದು ಬಹಳ ಐತಿಹಾಸಿಕ ಉದ್ಯಾನವಾಗಿದ್ದು, ಕರ್ನಾಟಕ ರಾಜ್ಯದ ಆಸ್ತಿಯಾಗಿದೆ. ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ತೋಟಗಾರಿಕೆ ಇಲಾಖೆಯಿಂದ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಈ ಬಾರಿ ಪೂರ್ಣಚಂದ್ರ ತೇಜಸ್ವಿ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬವನ್ನು ಪುಷ್ಪಪ್ರದರ್ಶನದಲ್ಲಿ ರೂಪಿಸಲಾಗಿದೆ ಎಂದು ತಿಳಿಸಿದರು.
ಇನ್ನು ಇಂದಿನಿಂದ ಜನವರಿ 26 ರವರೆಗೆ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ನಡೆಸಲಾಗುತ್ತಿದ್ದು, ಈ ಬಾರಿ ಗಾಜಿನ ಮನೆ ತುಂಬೆಲ್ಲಾ ತೇಜಸ್ವಿ ಬದುಕಿನ ಕುರಿತ ಪರಿಕಲ್ಪನೆ ಮೂಡಿಸಿದ್ದಾರೆ.
