ಬೆಂಗಳೂರು: ಭೂ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಿ, ಇಂದು ಸಾಂಕೇತಿಕವಾಗಿ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿರುವ ದಾಖಲೆಗಳ ಸ್ಯ್ಕಾನಿಂಗ್ ಗೆ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಅವರು ಇಂದು ಬೆಂಗಳೂರು ನಗರ ಜಿಲ್ಲೆಯ ಉತ್ತರ ಮತ್ತು ದಕ್ಷಿಣ ಉಪವಿಭಾಗಾಧಿಕಾರಿಗಳ ಕಚೇರಿಯ ಕಂದಾಯ ದಾಖಲಾತಿಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿಗಳು ಹಾಗೂ ಸುಳ್ಳು ದಾಖಲೆಗಳ ಸೃಷ್ಟಿ ಆಗುವುದನ್ನು ತಡೆಯಲು ಭೂ ದಾಖಲೆಗಳ ಡಿಜಿಟಲೀಕರಣ ಮಹತ್ವದ ಹೆಜ್ಜೆ ಇದಾಗಿದೆ. ರಾಜ್ಯಾದ್ಯಂತ 240 ತಾಲ್ಲೂಕುಗಳ ಪೈಕಿ 70 ತಾಲ್ಲೂಕುಗಳಲ್ಲಿ ಭೂ ದಾಖಲೆಗಳ ಗಣಕೀಕರಣವನ್ನು ಸಂಪೂರ್ಣವಾಗಿ ಮುಗಿಸಲಾಗಿದೆ. ಒಟ್ಟು 100 ಕೋಟಿ ಪುಟಗಳ ಭೂ ದಾಖಲೆಗಳಿದ್ದು ಈಗಾಗಲೇ ಸುಮಾರು 62 ಕೋಟಿ ಪುಟಗಳನ್ನು ಸ್ಕ್ಯಾನಿಂಗ್ ಮಾಡಲಾಗಿದೆ. ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಎಲ್ಲಾ ಪುಟಗಳನ್ನೂ ಸ್ಕ್ಯಾನ್ ಮಾಡಲಾಗುವುದು ಎಂದರು.
ಈ ಹಿಂದೆ ಹೊರ ಬಂದಿರುವ ನಕಲಿ ದಾಖಲೆಗಳ ಸೃಷ್ಟಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರತಿಯೊಂದು ಅನುಮಾನಾಸ್ಪದ ಪ್ರಕರಣಗಳನ್ನು ಕುಲಂಕೂಷವಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ದಾಖಲೆಗಳ ನೈಜತೆ ಕುರಿತು ವರದಿಯನ್ನು ಪಡೆದು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸ್ಕ್ಯಾನಿಂಗ್ ಮೂಲಕ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ರಕ್ಷಿಸುವುದರಿಂದ ಭವಿಷ್ಯದಲ್ಲಿ ನಕಲಿ ದಾಖಲೆಗಳ ಸೃಷ್ಟಿಗೆ ಕಡಿವಾಣ ಹಾಕಿದಂತಾಗುವುದು. ಕಂದಾಯ ದಾಖಲೆಗಳು ಅಥವಾ ಕಡತಗಳು ಕಳುವಾಗುವುದನ್ನು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಸಾರ್ವಜನಿಕರಿಗೆ ಕೈಬೆರಳ ತುದಿಯಲ್ಲೇ ಅವರ ಜಮೀನಿನ ದಾಖಲೆ ಸುಲಭವಾಗಿ ಸಿಗುವಂತೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ಸಾರ್ವಜನಿಕರಿಗೆ ಭೂ ಸುರಕ್ಷಾ ವೆಬ್ ಸೈಟ್ ಮೂಲಕ ತಮ್ಮ ಭೂ ದಾಖಲೆಗಳನ್ನು ಪಡೆಯಬಹುದಾಗಿದೆ. ಈಗಾಗಲೇ ಸ್ಕ್ಯಾನಿಂಗ್ ಆಗಿರುವ ಎಲ್ಲಾ ದಾಖಲೆಗಳು ಆನ್ ಲೈನ್ ನಲ್ಲಿ ಲಭ್ಯವಿದ್ದು, 39,39,569 ಪುಟಗಳನ್ನು ಸಾರ್ವಜನಿಕರು ಆನ್ ಲೈನ್ ಮೂಲಕ ಪಡೆದಿದ್ದಾರೆ” ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳಲ್ಲಿ ಮುಗಿಸಲಾಗುವುದು. ಕಂದಾಯ ಇಲಾಖೆ ಹಾಗೂ ನೋಂದಣಿ ಇಲಾಖೆಯಲ್ಲೂ ಸ್ಕ್ಯಾನಿಂಗ್ ಕೆಲಸಗಳು ಬಹುತೇಕ ಆರಂಭವಾಗಿದ್ದು, ಈ ಎಲ್ಲಾ ಕೆಲಸಗಳಿಗೆ ರೂ.150 ಕೋಟಿ ಅನುದಾನ ಇದೆ. ಈಗಾಗಲೇ ರೂ.100 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದರು. ಇದನ್ನೂ ಓದಿ: ಶಿಕ್ಷಣವಿಲ್ಲದಿದ್ದರೆ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿಲ್ಲ: ಸಿಎಂ
ಇದು ಸಂದರ್ಭದಲ್ಲಿ ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜಗದೀಶ್. ಜಿ, ಅಪರ ಜಿಲ್ಲಾಧಿಕಾರಿಗಳಾದ ಡಾ. ಜಗದೀಶ್ ಕೆ ನಾಯಕ್, ಉತ್ತರ ಮತ್ತು ದಕ್ಷಿಣ ಉಪವಿಭಾಗಾಧಿಕಾರಿಗಳಾದ ಡಾ. ಎಸ್. ಕಿರಣ್, ವಿಶ್ವನಾಥ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
