ಬಳ್ಳಾರಿ: ಬಳ್ಳಾರಿ ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಘಟನೆಯಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತ ಜಮೀರ್ ಅಹ್ಮದ್ ಖಾನ್ ಅವರು ಪ್ರತಿಕ್ರಿಯಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಯಾರನ್ನು ಕೂಡ ಬಿಡುವುದಿಲ್ಲ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಫೈರಿಂಗ್ ಹೇಗೆ ಆಯ್ತು? ಅಂತಾ ಪೊಲೀಸರು ತನಿಖೆ ಮಾಡ್ತಾ ಇದಾರೆ. ಸಿಎಂ ಸಹ ಈ ಘಟನೆಗೆ ಬೇಸರ ವ್ಯಕ್ತಪಡಿಸಿ ಸಿಟ್ಟು ಮಾಡಿಕೊಂಡಿದ್ದಾರೆ. ಯಾರೇ ಇದ್ರೂ ಕ್ರಮ ಕೈಗೊಳ್ತೀವಿ. ನಾಗೇಂದ್ರ ಬಳ್ಳಾರಿಗೆ ಹೋಗ್ತಾ ಇದ್ದಾರೆ. ನಾನು ಸಹ ಇಂದು ಸಂಪುಟ ಸಭೆ ಬಳಿಕ, ಸಿಎಂ ಜೊತೆ ಕೋಗಿಲು ಲೇಔಟ್ ಸಭೆ ಮುಗಿಸಿ ಬಳ್ಳಾರಿಗೆ ಹೋಗ್ತೀನಿ ಅಂತಾ ಸ್ಪಷ್ಟಪಡಿಸಿದ್ದಾರೆ.
ಜನಾರ್ದನ ರೆಡ್ಡಿ ಟಾರ್ಗೆಟ್ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್, ಯಾರನ್ನೋ ಟಾರ್ಗೆಟ್ ಮಾಡಿದ್ದಾರೆ ಅನ್ನೋದು ಸುಳ್ಳು. ಇದು ಸಣ್ಣ ವಿಚಾರಕ್ಕೆ ಆಗಿರುವ ಗಲಾಟೆ. ಇದು ಸರಿ ಮಾಡಬಹುದಿತ್ತು, ಬ್ಯಾನರ್ ಕಟ್ಟಿರೋದು ನಿಜ, ಅಂಟಿಸಿರೋದು ನಿಜ. ಇದು ಸಣ್ಣ ವಿಚಾರಕ್ಕೆ ಆಗಿರುವುದು. ಅಮಾಯಕ ಬಲಿಯಾಗಿದ್ದಾನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ರಿಪಬ್ಲಿಕ್ ಆಫ್ ಬಳ್ಳಾರಿ ಅನ್ಕೊಂಡಿದ್ದಾರೆ: ಬಿ. ನಾಗೇಂದ್ರ
ಇನ್ನೂ ʻಬಳ್ಳಾರಿ ರಿಪಬ್ಲಿಕ್ʼ ಆಗಿದೆ ಎಂಬ ಬಿಜೆಪಿ ಆರೋಪ ತಳ್ಳಿಹಾಕಿದ ಜಮೀರ್, ಇದು ಅಂತಹ ಘಟನೆ ಅಲ್ಲ. ಸಣ್ಣ ಘಟನೆಗೆ ಗಲಾಟೆ ಆಗಿ ದೊಡ್ಡದಾಗಿದೆ. ಇದು ಆಗಬಾರದಿತ್ತು. ಈಗ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ.
