ಬೆಂಗಳೂರು: ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು, ಮಂಜೂರು ಮಾಡಿ ತಾತ್ಕಾಲಿಕ ರಿಲೀಫ್ ನೀಡಿದೆ.
ಹೌದು, ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಬೈರತಿ ಬಸವರಾಜ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಬೈರತಿ ಬಸವರಾಜ್‌ಗೆ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ನಲ್ಲಿ ಇಂದು (ಶುಕ್ರವಾರ ಡಿ. 26) ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಬೈರತಿ ಬಸವರಾಜ್ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ಬೈರತಿ ಪಾತ್ರದ ಬಗ್ಗೆ ಯಾವುದೇ ಉಲ್ಲೇಖ ಆಗಿಲ್ಲ. ಆಸ್ತಿಯ ವಿಚಾರವಾಗಿ ದೂರು ಸಲ್ಲಿಕೆ ಮಾಡಲಾಗಿದೆ. ದೂರು ಹಾಗೂ ಎಫ್‌ಐಆರ್ ನಲ್ಲಿ ಬೈರತಿ ಬಸವರಾಜ್ ಪಾತ್ರ ಉಲ್ಲೇಖಿಸಿಲ್ಲ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ರು.
ಇದೇ ವೇಳೆ, ಎಸ್‌ಪಿಪಿ ಜಗದೀಶ್ ವಿದೇಶಕ್ಕೆ ತೆರಳಿರುವುದರಿಂದ ವಿಚಾರಣೆ ಮುಂದೂಡಲು ಹೈಕೋರ್ಟ್ ಗೆ ಸರ್ಕಾರಿ ವಕೀಲರಿಂದ ಮನವಿ ಮಾಡಿದ್ರು. ವಾದ ಮುಂದುವರಿಸಿದ ಬೈರತಿ ಪರ ವಕೀಲ ಚೌಟ, ರಾಜಕೀಯ ಕಾರಣಕ್ಕೆ ಕೇಸ್ ನಲ್ಲಿ ಸಿಲುಕಿಸಲು ಯತ್ನಿಸಲಾಗ್ತಿದೆ. ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ, ಸಿಐಡಿಗೆ ವರ್ಗಾವಣೆಯಾದ ಬಳಿಕ ಬಂಧಿಸಲು ಯತ್ನಿಸಲಾಗುತ್ತಿದೆ ಅಂತಾ ಹೈಕೋರ್ಟ್ ಗೆ ಬೈರತಿ ಬಸವರಾಜು ಪರವಾಗಿ ಪ್ರಮಾಣಪತ್ರ ಸಲ್ಲಿಕೆ ಮಾಡಲಾಯ್ತು.
