ಬೆಂಗಳೂರು: ರಾಜ್ಯ ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಈಗ ಬದುಕಿಗೆ ದಾರಿಯಾಗುವ ಕೌಶಲ್ಯ ಕಲಿಸುವವರಿಗಿಂತ ಕಾಸಿನ ಕೈಚಳಕ ಕಲಾವಿದರು ಹೆಚ್ಚಾಗಿದ್ದಾರೆ. ಇಲ್ಲಿ ಕೌಶಲ್ಯ ತರಬೇತಿಗೆ ಕಟ್ಟ ಕಡೆಯ ಆದ್ಯತೆ ಸಿಗುವುದೂ ಕಷ್ಟವಾಗಿದ್ದು, ಕಾಸು ಮಾಡುವ ಮೋಸದ ಮೇಳಗಳಿಗೆ ಆದ್ಯತೆ ಸಿಗುತ್ತಿದೆ. ಇದಕ್ಕೆ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನಿರಂತರ ಉತ್ತೇಜನ ನೀಡುತ್ತಿದ್ದು, ಇದರಿಂದ ಕೌಶಲ್ಯ ತರಬೇತಿಗೆ ಮೀಸಲಾಗಿದ್ದ ಕೋಟ್ಯಂತರ ರೂಪಾಯಿ ಹಣ ಮೇಳದಲ್ಲಿ ಕೊಚ್ಚಿ ಹೋಗುತ್ತಿದೆ. ಇದೆಲ್ಲದಕ್ಕೂ ನಿಗಮದ ಅಧ್ಯಕ್ಷ ಕಾಂತಾನಾಯಕ್ ನೇತೃತ್ವ ವಹಿಸುತ್ತಿದ್ದು, ಇವರಿಗೆ ಮ್ಯಾನೇಜರ್ ಹೆಸರಿನ ಹೊರಗುತ್ತಿಗೆ ಉದ್ಯೋಗಿ ಅವಿನಾಶ್ ಕಿಂಗ್ ಪಿನ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ ಈ ಇಬ್ಬರೂ ಸೇರಿಕೊಂಡು ಸಚಿವರನ್ನು ದಿಕ್ಕುತಪ್ಪಿಸಿ ಮೇಳದ ಹೆಸರಿನಲ್ಲಿ ತಮ್ಮ ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಿಕ್ಕಿದ್ದನ್ನು ಸಚಿವರ ಮೂತಿಗೂ ಒರೆಸಿ ಜಾರಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳೇ ಹೇಳಿದ್ದಾರೆ.
ಇದರಿಂದ ರಾಜ್ಯಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ದಿನದಿನಕ್ಕೂ ಹೆಚ್ಚುತ್ತಿರುವ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಸಿಗುವಂತೆ ಮಾಡುವ ಪ್ರಯತ್ನ ಸಂಪೂರ್ಣ ಸ್ಥಗಿತವಾಗಿದೆ. ಹಾಗೆಯೇ ಸರಕಾರ ಇದಕ್ಕಾಗಿ ಮೀಸಲಿಡುತ್ತಿರುವ ಅನುದಾನ ಸಿಂಹಪಾಲು ಇವೆಂಟ್ ಮ್ಯಾನೇಜ್ ಮೇಂಟ್ ಮಾಡುವ ಕಂಪನಿಗಳಿಗೆ ಲಾಭ ಮಾಡುವ ಉದ್ಯೋಗ ಮೇಳ ನಡೆಸಲು ವೆಚ್ಚ ಮಾಡಲಾಗುತ್ತಿದೆ. ಈ ಉದ್ಯೋಗ ಮೇಳ ನಡೆಸಿ ಕಂಪನಿಗಳಿಂದ ನಿರುದ್ಯೋಗಗಳಿಗೆ ಉದ್ಯೋಗ ಕೊಡಿಸಿದಂತೆ ಮಾಡಿ ಕೋಟಿ ಕೋಟಿ ಲಪಟಾಯಿಸುವ ದಂಧೆಯಾಗಿ ಮಾರ್ಪಟ್ಟಿದೆ. ಇಂಥ ಘನಕಾರ್ಯದ ಮೇಳವೊಂದಕ್ಕೆ ಸುಮಾರು 8ರಿಂದ 10 ಕೋಟಿ ರುಪಾಯಿಗಳ ವರೆಗೂ ವೆಚ್ಚ ಮಾಡಲಾಗುತ್ತಿದ್ದು, ಕಳೆದ ಎರಡು ವರ್ಷಗಳಿಂದ ಸುಮಾರು 10ಕ್ಕೂ ಹೆಚ್ಚು ಉದ್ಯೋಗ ಮೇಳಗಳನ್ನು ನಡೆಸಿ ಕೋಟ್ಯಂತರ ಹಣವನ್ನು ಲಪಾಟಾಯಿಸಲಾಗಿದೆ ಎನ್ನುವ ಆರೋಪಗಳಿವೆ. ಕಾರಣ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದವರ ಮಾಹಿತಿಯೇ ಇಲಾಖೆಯಲ್ಲಾಗಲಿ, ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಇಲ್ಲ. ಇನ್ನು ಉದ್ಯೋಗ ನೀಡುವವರ ಅಮಾಯಕ ನಿರುದ್ಯೋಗಿಗಳ ಮಾಹಿತಿ ಪಡೆದು ಹೋದವರೇ ಹಿಂತಿರುಗಿ ನೋಡುತ್ತಿಲ್ಲ. ಹೀಗಾಗಿ ಕೌಶಲ್ಯ ಅಭಿವೃದ್ಧಿ ನಿಗಮದ ಎಂದರೆ ವರ್ಷಪೂರ್ತಿ ಕೌಶಲ್ಯ ನೀಡುವ ಕೆಲಸ ಬಿಟ್ಟು ಒಂದೇ ದಿನ ಉದ್ಯೋಗ ಮೇಳದ ಮೂಲಕ ಹಣ ವೆಚ್ಚ ಮಾಡಿದಂತೆ ಬಿಲ್ ವಿದ್ಯೆ ಪ್ರದರ್ಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಚಿವರ ಅಭಿವೃದ್ಧಿಯ ಕೆಲಸದಲ್ಲಿ ಅಡ್ಡಗಾಲು ಹಾಕಬೇಡಿ
ಇಷ್ಟಾದರೂ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿಲ್ಲ. ಈ ಮಧ್ಯೆ ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ನೌಕರರೇ ಆಡಳಿತ ಮತ್ತು ಹಣಕಾಸು ಅಧಿಕಾರ ಚಲಾಯಿಸುತ್ತಿದ್ದು, ಇದಕ್ಕೆ ಸಚಿವರು ಅವಕಾಶ ನೀಡಿರುವುದೇ ಮೂಲ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ವಿದೇಶದಲ್ಲಿ ಉದ್ಯೋಗ ಕೊಡಿಸುವ ಇಂಟರ್ ನ್ಯಾಷನಲ್ ಮೈಗ್ರೆಷನ್ ಸೆಂಟರ್ ವ್ಯವಸ್ಥಾಪಕರಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಅವಿನಾಶ್ ಇಡೀ ಇಲಾಖೆ ಕಾರ್ಯಕ್ರಮಗಳು ಕೌಶಲ್ಯವನ್ನೇ ಮರೆಯಲು ಕಾರಣವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದರೆ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು, ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ವಿಚಾರದಲ್ಲಿ ಕೌಶಲ್ಯಾಭಿವೃದ್ಧ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗಿಂತ ಮ್ಯಾನೇಜರ್ ಅವಿನಾಶ್ ಮೇಲೆಯೇ ಅವಲಂಬಿತರವಾಗಿರುವುದು ಇಲಾಖೆಯ ಕೌಶಲ್ಯ ತರಬೇತಿ ಕಾರ್ಯಕ್ರಗಳು ಮೂಲೆ ಸೇರುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅವರು ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಿಂತ ವಿದೇಶದಲ್ಲಿ ಉದ್ಯೋಗ ಕೊಡಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಸಚಿವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆನ್ನಲಾಗಿದೆ. ಇವರೊಂದಿಗೆ ನಿಗಮದ ಅಧ್ಯಕ್ಷರೂ ಸೇರಿಕೊಂಡಿದ್ದು ಒಟ್ಟಾರೆ ಇಲಾಖೆ ಮೂಲ ಉದ್ದೇಶವನ್ನೇ ಮರೆತು ಅಕ್ರಮ ದಾರಿ ಹಿಡಿದಿದೆ ಎಂದು ತಿಳಿದುಬಂದಿದೆ.
ಇದು ಕೌಶಲ್ಯ ಕರ್ಮಕಾಂಡ
ರಾಜ್ಯದಲ್ಲಿ ಗ್ರಾಮೀಣ ಭಾಗದ ಯುವಕರು, ಯುವತಿಯರು ಸೇರಿದಂತೆ ಎಲ್ಲರಿಗೂ ಕೌಶಲ್ಯ ಅಭಿವೃದ್ಧಿಗಾಗಿ ಸುಮಾರು 200 ಕೋಟಿ ರು. ವರೆಗೂ ನೀಡಲಾಗುತ್ತಿತ್ತು. ಆದರೆ ಗ್ಯಾರಂಟಿಗಳ ಕಾರಣಗಳಿಂದಾಗಿ ಈ ವರ್ಷ ಬರೀ 80 ಕೋಟಿ ರು.ಗಳನ್ನು ಮಾತ್ರ ನೀಡಲಾಗಿದ್ದು, ಇದರಲ್ಲಿ ಬಹುತೇಕ ಅನುದಾನವನ್ನು ಉದ್ಯೋಗ ಮೇಳ ಹಾಗೂ ವಿದೇಶ ಪ್ರವಾಸಕ್ಕೆ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.
ಹೀಗಾಗಿ ತಲಾ 7ರಿಂದ10 ಕೋಟಿ ರು. ವೆಚ್ಚದಲ್ಲಿ ಉದ್ಯೋಗ ಮೇಳಗಳನ್ನು ನಡೆಸಲಾಗುತ್ತಿದ್ದು ಈ ತನಕ ಕಲಬುರ್ಗಿ ಸೇರಿದಂತೆ ನಾಲ್ಕು ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ನಡೆಸಲಾಗಿದ್ದು, ಇದಕ್ಕಾಗಿ ನಡೆಸಲಾಗುವ ಒಂದು ದಿನದ ಕಾರ್ಯಕ್ರಮದ ಗುತ್ತಿಗೆಯನ್ನು ಖಾಸಗಿ ಗುತ್ತಿಗೆದಾರರಿಗೆ ಯಾವುದೇ ಟೆಂಡರ್ ಮಾಡದೇ ವಿನಾಯಿತಿ ನೀಡಿ ಆದೇಶ ನೀಡಲಾಗುತ್ತಿದೆ. ಅದರಲ್ಲೂ ಅಧಿಕಾರಿಗಳ ಕೈ ಬೆಚ್ಚಗೆ ಮಾಡುವ ಗುತ್ತಿಗೆದಾರರಿಗೆ ಇದರ ಗುತ್ತಿಗೆ ನೀಡಲಾಗುತ್ತಿದ್ದು, ಇದರಿಂದ ಹಣ ವೆಚ್ಚವಾಗುವುದೇ ವಿನಃ ಯಾರಿಗೆ, ಯಾವ ಸಂಸ್ಥೆಯಲ್ಲಿ ನೌಕರಿ ಸಿಕ್ಕಿದೆ ಎನ್ನುವ ಮಾಹಿತಿಯೇ ತಿಳಿಯುವುದೇ ಇಲ್ಲ. ಹಾಗೊಂದು ವೇಳೆ ಬೇಕೆಂದರೂ ಈ ಮಾಹಿತಿ ಉದ್ಯೋಗ ಮೇಳ ನಡೆಸಿದ ಗುತ್ತಿಗೆದಾರರಿಗೆ ಮಾತ್ರ ತಿಳಿದಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂಲ ಕೆಲಸವನ್ನೇ ಮರೆತ ಇಲಾಖೆ
ರಾಜ್ಯದಲ್ಲಿ ಸರಕಾರಿ ಸ್ವಾಮ್ಯದ ಜಿಟಿಟಿಸಿ, ಐಟಿಐ ಹಾಗೂ ಕೆಜಿಟಿಟಿ ಸೇರಿದಂತೆ ಸುಮಾರು 150 ತರಬೇತಿ ಸಂಸ್ಥೆಗಳಿದ್ದು ಇವುಗಳಲ್ಲಿ ಪಿಟ್ಟರ್, ಎಲೆಕ್ರ್ಚೀಷಿಯನ್ ಸೇರಿದಂತೆ ಸಾಮಾನ್ಯ ತರಬೇತಿಗಳನ್ನು ಮಾತ್ರ ನೀಡುತ್ತಿದೆ. ಆದರೆ ಇಲಾಖೆಯಲ್ಲಿ ಸುಮಾರು 400ಕ್ಕೂ ಹೆಚ್ಚಿನ ರೀತಿಯ ತರಬೇತಿಗಳಿದ್ದು ಅವುಗಳಲ್ಲಿ ಇಲಾಖೆ ನಡೆಸುತ್ತಿರುವುದು ಬರೀ 16 ರೀತಿಯ ತರಬೇತಿಗಳನ್ನುಮಾತ್ರ. ಅಂದರೆ ಬಹುತೇಕ ತರಬೇತಿಗಳು ಇಲಾಖೆಯಿಂದ ಮೂಲೆ ಸೇರಿವೆ. ಹೀಗಾಗಿ ನಿರುದ್ಯೋಗಿಗಳಿಗೆ ಕೌಶಲ್ಯ ಸಿಗದೆ ವಂಚಿತರಾಗುತ್ತಿದ್ದು, ಇದಕ್ಕಾಗಿ ಮೀಸಲಿಟ್ಟ ಹಣ ಉದ್ಯೋಗ ಮೇಳದ ಹೆಸರಿನಲ್ಲಿ ಇವೆಂಟ್ ಮ್ಯಾನೇಜ್ ಮೆಂಟ್ ಮಾಡುವ ಗುತ್ತಿಗೆದಾರರ ಪಾಲಾಗುತ್ತಿದೆ ಎನ್ನಲಾಗಿದೆ.
