ಬೆಳಗಾವಿ: ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ತಪ್ಪು ಮಾಹಿತಿ ಕೊಟ್ಟದ್ದಕ್ಕೆ ಸಚಿವರೇ ಕ್ಷಮೆ ಕೇಳಿದ್ದಾರೆ. ಗ್ಯಾರಂಟಿ ಯೋಜನೆಯನ್ನು ಫಲಾನುಭವಿಗಳಿಗೆ ಕಾಲಕಾಲಕ್ಕೆ ತಲುಪಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು (ಗುರುವಾರ ಡಿಸೆಂಬರ್ 18) ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆ ಕೇಳಿದವರದ್ದೇ ತಪ್ಪೆಂದು ಬಿಂಬಿಸುವ ಪ್ರಯತ್ನವೂ ನಡೆಯಿತು. ಒಂದುವೇಳೆ ಪ್ರಶ್ನಿಸದೇ ಇದ್ದರೆ, ಆಧಾರದೊಂದಿಗೆ ಬಿಜೆಪಿ ನಿರೂಪಿಸದೇ ಇದ್ದರೆ ಫೆಬ್ರವರಿ, ಮಾರ್ಚ್ ತಿಂಗಳ ಹಣ 5 ಸಾವಿರ ಕೋಟಿ ಗೋವಿಂದ ಆಗುತ್ತಿತ್ತು ಎಂದು ಆಕ್ಷೇಪಿಸಿದರು. ಬಡವರಿಗೆ ತಲುಪಬೇಕಾದ ಹಣ ನುಂಗುತ್ತಿದ್ದರು ಎಂದು ಆರೋಪಿಸಿದರು.
ಹಿಂದಿನ ಬಜೆಟ್ ಈಗ ಇಲ್ಲ. ಈಗ 2025-26ರ ಬಜೆಟ್ ಇದೆ. ಅದರ ಮರುಹೊಂದಾಣಿಕೆ ಅಸಾಧ್ಯ ಎಂದ ಅವರು, ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ನಿನ್ನೆ ಹೇಳಿದ್ದಾಗಿ ತಿಳಿಸಿದರು. ಅದು 50 ರೂ, 500 ರೂ. ಅಥವಾ 5 ಸಾವಿರ ರೂ. ಅಲ್ಲ. 5 ಸಾವಿರ ಕೋಟಿ ಎಂದು ಗಮನ ಸೆಳೆದರು. ಇದನ್ನೂ ಓದಿ: ಕಾಂಗ್ರೆಸ್ನವರು 5 ಸಾವಿರ ಕೋಟಿ ಪಟಾಪಟ್ ಲೂಟಿ ಹೊಡೆದರು: ಆರ್.ಅಶೋಕ್
ಶಕ್ತಿ ಯೋಜನೆಗೆ ಕಾಲಕಾಲಕ್ಕೆ ನಿಗಮಗಳಿಗೆ ಹಣ ಕೊಡದೇ ಇದ್ದರೆ ಬಸ್ ಕೆಟ್ಟು ನಿಲ್ಲದೇ ಇನ್ನೇನಾಗಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಹೊಸ ಟಯರ್ ಹಾಕಲು ದುಡ್ಡಿಲ್ಲ; ಬಿಡಿಭಾಗ ಖರೀದಿಗೆ ಹಣ ಇಲ್ಲ. ಸಾರಿಗೆ ನಿಗಮದ ನೌಕರರಿಗೆ ಕಾಲಕಾಲಕ್ಕೂ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ ಎಂದು ಆಕ್ಷೇಪಿಸಿದರು.
