ಬೆಂಗಳೂರು: ಜಾಲಹಳ್ಳಿ ಅಂಡರ್ ಪಾಸ್ ಕಾಮಗಾರಿ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಮುನಿರಾಜು ಅವರ ಪ್ರಶ್ನೆಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ಜಾಲಹಳ್ಳಿ ಅಂಡರ್ ಪಾಸ್ ಕಾಮಗಾರಿ ಪ್ರಾರಂಭ ಹಾಗೂ ಕೆಲವರಿಗೆ ಪರಿಹಾರ ಬಾಕಿ ಇರುವ ವಿಚಾರವಾಗಿ ಮುನಿರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, “ಈ ಅಂಡರ್ ಪಾಸ್ ಕಾಮಗಾರಿಯನ್ನು ಪಿಜಿಬಿ ಎಂಬ ಗುತ್ತಿಗೆದಾರ ಸಂಸ್ಥೆಗೆ ನೀಡಿದ್ದೇವೆ. 2021 ರಲ್ಲಿ 57 ಕೋಟಿ ರೂ. ಅನುದಾನದಲ್ಲಿ ಈ ಕೆಲಸವನ್ನು ವಹಿಸಲಾಗಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ 48 ಜನ ಆಸ್ತಿ ಮಾಲೀಕರಿಗೆ ಪರಿಹಾರ ನೀಡಲಾಗಿದೆ. ಒಟ್ಟು 85 ಕೋಟಿ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಇಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ 139 ಕೋಟಿ ರೂ. ಅಂದಾಜು ಮಾಡಲಾಗಿದೆ. ಇನ್ನು 26 ಭೂಮಾಲೀಕರು ತಮ್ಮ ಆಸ್ತಿ ನೀಡಬೇಕಿದ್ದು, ಇದಕ್ಕೆ 53 ಕೋಟಿ ರೂ. ಪರಿಹಾರ ನೀಡಬೇಕಾಗಿದೆ. ಟಿಡಿಆರ್ ಅಥವಾ ಹಣವನ್ನು ನೀಡಬೇಕಾಗಿದೆ. ಈ ಆಸ್ತಿ ಮಾಲೀಕರ ಜೊತೆ ಶಾಸಕ ಮುನಿರಾಜು ಅವರು ಚರ್ಚೆ ಮಾಡಿದರೆ ಅವರಿಗೆ ಟಿಡಿಆರ್ ನೀಡಿ ಕೆಲಸ ಪ್ರಾರಂಭ ಮಾಡಿಸಲಾಗುವುದು. ಇದು ಸಂಚಾರ ದಟ್ಟಣೆ ಇರುವ ಪ್ರಮುಖ ಪ್ರದೇಶ. ಹೀಗಾಗಿ ಅವರು ಬೇಡಿಕೆ ಇಟ್ಟಿರುವುದು ಸರಿಯಾಗಿದೆ” ಎಂದರು. ಇದನ್ನೂ ಓದಿ: “ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ”. ಈಗಲೂ ನಾನೇ ಮುಖ್ಯಮಂತ್ರಿ: ಸಿಎಂ ಸಿದ್ದು
ಈ ಮಧ್ಯೆ ಬಿಜೆಪಿ ಶಾಸಕ ಮುನಿರತ್ನ ಅವರು ನಮ್ಮ ಕ್ಷೇತ್ರದಲ್ಲಿ ಅನೇಕ ಮೇಲ್ಸೇತುವೆ ಕಾಮಗಾರಿಗಳು ನಿಂತಿದ್ದು, ಸಚಿವರು ಎಲ್ಲಾ ಶಾಸಕರ ಸಭೆ ಕರೆದು ನಮ್ಮ ಅಹವಾಲು ಸ್ವೀಕಾರ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಶಾಸಕ ಮುನಿರಾಜು ಅವರು ನನಗೆ ಪ್ರಶ್ನೆ ಕೇಳಿದ್ದು, ಅವರಿಗೆ ಉತ್ತರ ನೀಡಿದ್ದೇನೆ. ಮಿಸ್ಟರ್ ಮುನಿ… ಅವರು, ತಮ್ಮ ವಿಚಾರವಾರವಾಗಿ ಸದನದಲ್ಲಿ ಪ್ರಶ್ನೆ ಹಾಕಲಿ, ನಾನು ಅವರಿಗೂ ಉತ್ತರ ನೀಡುತ್ತೇನೆ ಎಂದರು.
