ಬೆಳಗಾವಿ: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಟ್ಟಾಳು, ಅನುಭವಸಂಪನ್ನ ರಾಜಕಾರಣಿ ಹಾಗೂ ಸಮಾಜಮುಖಿ ಚಿಂತನೆಯ ಮಹಾನ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು ನಮ್ಮನ್ನೆಲ್ಲಾ ಅಗಲಿರುವುದು ರಾಜ್ಯ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಕೆಹೆಚ್.ಮುನಿಯಪ್ಪ ಹೇಳಿದರು.
ಸದನದಲ್ಲಿ ಮಾತನಾಡಿದ ಅವರು, ಒಮ್ಮೆ ಲೋಕಸಭಾ ಸದಸ್ಯರಾಗಿ, 6 ಬಾರಿ ಶಾಸಕರಾಗಿ, ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದು ಕೇವಲ ಹುದ್ದೆಗಳಿಗಾಗಿ ಅಲ್ಲ, ಜನಸೇವೆಯೇ ಅವರ ಧ್ಯೇಯವಾಗಿತ್ತು. ಸಾರ್ವಜನಿಕ ಜೀವನದಲ್ಲಿ ಅಪವಾದಗಳಿಂದ ದೂರವಿದ್ದು, ದೊರೆತ ಅಧಿಕಾರವನ್ನು ಜನಕಲ್ಯಾಣಕ್ಕಾಗಿ ಬಳಸಿದ ಅಪರೂಪದ ನಾಯಕರು ಅವರು. ಇದನ್ನೂ ಓದಿ: ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಸಿಎಂ ಸಂತಾಪ
ಶಾಮನೂರು ಶಿವಶಂಕರಪ್ಪ ಅವರು ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಹಾಗೂ ಅವರ ಸುದೀರ್ಘ ರಾಜಕಾರಣದ ಪಯಣದಲ್ಲಿ ಅವರೊಂದಿಗೆ ನಿಕಟವಾಗಿ ಒಡನಾಟಇತ್ತು ಅವರು ಯಾವಾಗಲೂ ಅಧಿಕಾರದ ಹಂಬಲಕ್ಕಿಂತ ಸಮಾಜದ ಹಿತವನ್ನೇ ಮೊದಲಿಗಿಟ್ಟ ವ್ಯಕ್ತಿತ್ವ. ಬಡವರ ಪರವಾಗಿ, ದುರ್ಬಲರ ಧ್ವನಿಯಾಗಿ ಅವರು ಕೆಲಸ ಮಾಡಿಕೊಂಡು ಬಂದವರು.
ಸಮಾಜದ ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವ ವಿಶಾಲ ಮನಸ್ಸು ಅವರದ್ದಾಗಿತ್ತು. ವಿಶೇಷವಾಗಿ ಲಿಂಗಾಯತ ಸಮುದಾಯವನ್ನು ಮುನ್ನಡೆಸುವಲ್ಲಿ, ಶಿಕ್ಷಣ, ಆರೋಗ್ಯ, ತೋಟಗಾರಿಕೆ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ.
ದಾವಣಗೆರೆಯನ್ನು ಶಿಕ್ಷಣದ ಕೇಂದ್ರವನ್ನಾಗಿ ರೂಪಿಸುವಲ್ಲಿ ಅವರ ಕೊಡುಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ. ಅವರ ನಿಧನದಿಂದ ರಾಜ್ಯವು ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಿದೆ ಇದು ಕೇವಲ ಒಂದು ಕುಟುಂಬದ ಅಥವಾ ಪಕ್ಷದ ನಷ್ಟವಲ್ಲ, ಸಂಪೂರ್ಣ ಕರ್ನಾಟಕದ ನಷ್ಟವಾಗಿದೆ.
ಈ ದುಃಖದ ಸಂದರ್ಭದಲ್ಲಿ, ಅವರ ಕುಟುಂಬದ ಸದಸ್ಯರಿಗೆ, ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಮತ್ತು ಬೆಂಬಲಿಗರಿಗೆ ನನ್ನ ಹಾಗೂ ಸರ್ಕಾರದ ಪರವಾಗಿ ಹೃದಯಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ. ಶಾಮನೂರು ಶಿವಶಂಕರಪ್ಪ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.
