ಬೆಳಗಾವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಇದಕ್ಕಾಗಿ ನಮ್ಮದೇ ಆದ ಸಮಯ ನಿಗದಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಒಳಮೀಸಲಾತಿ ವಿಚಾರ ಬಾಕಿ ಇರುವ ಕಾರಣಕ್ಕೆ ಒಂದಷ್ಟು ಭರ್ತಿ ಕೆಲಸ ಬಾಕಿಯಿದೆ ಎಂದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಒಂದರಲ್ಲೇ ಕಾವೇರಿ ನೀರಾವರಿ ನಿಗಮ ನಿಯಮಿತ, ವಿಜೆಎನ್ ಎಲ್, ಭದ್ರಾ ಮೇಲ್ದಂಡೆ ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 2,800 ಕೋಟಿ ರೂ. ಮೊತ್ತದ ಕಾಮಗಾರಿಗಳು ಇದೊಂದೇ ತಾಲ್ಲೂಕಿನಲ್ಲಿ ನಡೆಯುತ್ತಿದೆ.
ಚಿಕ್ಕನಾಯಕನಹಳ್ಳಿಯವರು ಇಷ್ಟೊಂದು ಬುದ್ದಿವಂತರು ಎಂದು ನಾನು ತಿಳಿದುಕೊಂಡಿರಲಿಲ್ಲ. ಆದರೂ ಈಗ ಸ್ಪೆಷಲ್ ಪ್ಯಾಕೇಜ್ ನೀಡಿ ಎಂದು ಹೇಳುತ್ತಿದ್ದಾರೆ. ಯಾರ ಕಾಲದಲ್ಲಿ ಇದೆಲ್ಲವೂ ಆಯಿತು ಎಂದು ನಾನು ಚರ್ಚೆ ನಡೆಸಲು ಹೋಗುವುದಿಲ್ಲ. ಪಕ್ಷ, ವ್ಯಕ್ತಿ ಎಲ್ಲವನ್ನು ಬಿಟ್ಟು ಕೆಲಸವನ್ನು ಮಾಡಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ ನೀಡಿದ ಮಧು ಬಂಗಾರಪ್ಪ!
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆಗೆ ಘೋಷಿಸಿದ 5,300 ಕೋಟಿ ರೂ. ಹಣ ನೀಡಿದರೆ, ಸಾಕಷ್ಟು ಕೆಲಸಗಳನ್ನು ಮುಗಿಸಬಹುದು. ನಾನು ಪದೇ, ಪದೇ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದರೆ ವಿಪಕ್ಷಗಳಿಗೆ ಬೇಸರವಾಗಬಹುದು. ಅವರು ಕೊಡದೇ ಇದ್ದರು, ಈ ಭಾಗದ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇನ್ನು ಈ ಭಾಗದಲ್ಲಿ ಅರಣ್ಯ ಭೂಮಿ ಬಳಕೆಗೆ ಅನುಮತಿ ಸಿಗಬೇಕಿದೆ. ಅನುಮತಿ ಸಿಕ್ಕರೆ ಹೆಚ್ಚಿನ ಕೆಲಸ ಮುಗಿದಂತೆ ಎಂದು ತಿಳಿಸಿದರು.
