ಬೆಂಗಳೂರು: ಇತ್ತೀಚಿಗೆ ತರಕಾರಿಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಗ್ರಾಹಕರಿಗೆ ಬರೆ ಎಳೆದಂತಾಗಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರುತ್ತಿರುವುದರಿಂದ ಗ್ರಾಹಕರು ಕಂಗಾಲಾಗಿರುವ ಬೆನ್ನಲ್ಲೇ ಇದೀಗ ಕೆಂಪು ಸುಂದರಿ ಎಂದೇ ಹೆಸರು ಹೊಂದಿರುವ ಟೊಮೆಟೊಗೆ ಬಾರಿ ಬೇಡಿಕೆ ಬಂದಿದೆ.
ಯೆಸ್.. ಕಳೆದ ಒಂದು ವಾರದಿಂದ ಟೊಮ್ಯಾಟೋ ಬೆಲೆ ಏರಿಕೆ ಆಗಿರುವುದರಿಂದ 1 ಕೆಜಿಗೆ 90ರೂ ಇಂದು 100 ರೂ. ಗೆ ಮಾರಟವಾಗುತ್ತಿದೆ.
ಇನ್ನು ಟೊಮೆಟೊಗೆ ದೇಶ ವಿದೇಶದೆಲ್ಲೆಡೆ ಬೇಡಿಕೆ ಇದ್ದೇ ಇದೆ. ಪ್ರತಿಯೊಂದು ಕಿಚನ್ ಗಳಲ್ಲಿ ಒಂದಿಲ್ಲೊಂದು ಅಡುಗೆ ಮಾಡಲು ಟೊಮೆಟೊ ಬೇಕೇಬೇಕು. ಇದ್ರಿಂದ ವರ್ಷದ 365 ದಿನಗಳಲ್ಲೂ ರೈತರು ಟೊಮೆಟೊ ಬೆಳೆಯುತ್ತಾರೆ. ಆದ್ರೆ ಬೆಳೆದ ಬೆಳೆಗೆ ಬೆಲೆ ಸಿಗೋದು ಬಹಳ ಕಡಿಮೆ.
ಆದರೆ ಕಳೆದ ಕೆಲವು ದಿನಗಳಿಂದ ಟೊಮೆಟೊಗೆ ಭಾರೀ ಬೆಲೆ ಬಂದಿದೆ. ಕೆಜಿ ಟೊಮೆಟೊ ಮಾರುಕಟ್ಟೆಯಲ್ಲಿ 70 ರೂಪಾಯಿಯಿಂದ 90 ರೂಪಾಯಿವರೆಗೂ ಮಾರಾಟವಾಗ್ತಿದೆ. ಇನ್ನೂ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಟೊಮೆಟೊ ಮಾರುಕಟ್ಟೆಯಲ್ಲಿ 15 ಕೆ.ಜಿಯ ಒಂದು ಕ್ರೇಟ್ ಟೊಮೆಟೊ ಸರಾಸರಿ 700 ರೂಪಾಯಿಗೆ ಮಾರಾಟವಾಗ್ತಿದೆ.
ಕೆ.ಜಿ ಸೇಬಿನ ಬೆಲೆ 100 ರೂ. ಇದ್ರೆ ಟೊಮೆಟೊ ಬೆಲೆ ಅದಕ್ಕೆ ಸರಿಸಮನಾಗಿ ಏರಿಕೆಯಾಗ್ತಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ಆಪಲ್ ಕಾಣಿಸುತ್ತಿದೆ ಆದ್ರೆ ಟೊಮೆಟೊ ಕಣ್ಮರೆಯಾಗ್ತಿದೆ.
