ಬೆಂಗಳೂರು: ಜನನ ನೀಡುವವಳು ತಾಯಿ, ಜೋಪಾನ ಮಾಡುವವಳು ಅಕ್ಕ, ಅಕ್ಷರ ಕಲಿಸಿದಾಕೆ ಶಿಕ್ಷಕಿ, ಜೊತೆಯಾಗಿ ನಿಲ್ಲುವವಳು ಹೆಂಡತಿ, ಮುಪ್ಪಿನಲ್ಲಿ ಆರೈಕೆ ಮಾಡುವವಳು ಮಗಳು, ಸತ್ತಾಗ ಜಾಗ ಕೊಡುವವಳು ಭೂಮಿ ತಾಯಿ. ಮನೆಯನ್ನು ಬೆಳಗುವವಳು ಹೆಣ್ಣು. ನೀವೆ ಕುಟುಂಬ ಹಾಗೂ ಸಮಾಜದ ಶಕ್ತಿ ಎಂದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶ್ಲಾಘಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಪೋಷಕರು, 2ನೇ ತಾಯಿಯಾಗಿ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಲಹಿ ದೇಶದ ಭವಿಷ್ಯ ರೂಪಿಸುವವರು. ಅಕ್ಷರಭ್ಯಾಸ ಮಾಡಿಸುವ ಸರಸ್ವತಿಯ ಸನ್ನಿಧಿ ಅಂಗನವಾಡಿ” ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ಬಣ್ಣಿಸಿದರು.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಸ್ವಂತ ಮಕ್ಕಳಿಗೂ ಸಮಯ ನೀಡದೆ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತ್ಯಾಗಮೂರ್ತಿಗಳು ನೀವು ಎಂದರು.
ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗ್ರಾಮದ ಮಹಿಳೆಯರ ಆರೋಗ್ಯ ಕಾಪಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ನಿಮ್ಮ ತ್ಯಾಗ, ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಇಂದಿರಾಗಾಂಧಿ ಅವರು ಐವತ್ತು ವರ್ಷಗಳ ಹಿಂದೆ ತಂದಂತಹ ಕನಸಿನ ಯೋಜನೆಯ ಯಶಸ್ಸಿಗೆ ದುಡಿಯುತ್ತಿರುವ ಅಂಗನವಾಡಿ ತಾಯಂದಿರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ” ಎಂದು ಹೇಳಿದರು.
ಸ್ತ್ರೀ ಶಕ್ತಿ ಸಂಘಗಳಿಂದ ಆರ್ಥಿಕ ಸಬಲತೆ
ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಆಶಾ ಯೋಜನೆ, ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಸ್ತ್ರೀ ಶಕ್ತಿ ಸಂಘ ಯೋಜನೆ ತರಲಾಯಿತು. ನಾನು ಸಹಕಾರ ಸಚಿವನಾಗಿದ್ದಾಗ ಬೀದರ್ ಗೆ ತೆರಳಿದ್ದ ವೇಳೆ ಮಹಿಳಾ ಸಂಘಟನೆ ಕೆಲಸಗಳನ್ನು ಗಮನಿಸಿ ಇದಕ್ಕೆ ಒಂದು ಸ್ವರೂಪ ನೀಡಬೇಕು ಎಂದು ಎಸ್.ಎಂ.ಕೃಷ್ಣ ಅವರ ಬಳಿ ಚರ್ಚೆ ನಡೆಸಿದೆ. ತದ ನಂತರ ಕ್ಯಾಬಿನೆಟ್ ಮುಂದೆ ಚರ್ಚಿಸಿ ಸಚಿವರಾಗಿದ್ದ ಮೋಟಮ್ಮ ಅವರಿಗೆ ಇದರ ಜವಾಬ್ದಾರಿ ನೀಡಲಾಯಿತು ಎಂದರು. ಇದನ್ನೂ ಓದಿ: ಮಹಿಳೆಯರಲ್ಲಿ ಶೇ 100 ರಷ್ಟು ಸಾಕ್ಷರತೆ, ವೈಚಾರಿಕ ಹಾಗೂ ವೈಜ್ಞಾನಿಕ ಜ್ಞಾನ ಬರಬೇಕು: ಸಿಎಂ
ಇಂದು ಸ್ತ್ರೀ ಶಕ್ತಿ ಸಂಘಗಳು ಸಮಾಜದ ಶಕ್ತಿಗಳಾಗಿ ಬೆಳೆದಿವೆ. ಇದರಿಂದ ಆರ್ಥಿಕವಾದ ಶಕ್ತಿ ಲಭಿಸಿದೆ. ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ. ಇಂತಹ ಶಕ್ತಿಯನ್ನು ಕಾಂಗ್ರೆಸ್ ಮಹಿಳೆಯರಿಗೆ ನೀಡಿದೆ. ಇಂತಹ ಯಶಸ್ವಿ ಕಾರ್ಯಕ್ರಮ ಇಡೀ ದೇಶದಲ್ಲಿ ಯಾರು ಮಾಡಿಲ್ಲ ಎಂದರು.
