ಶಹಾಪುರ: ಅಹಿಂದ ಬಲಗೊಂಡರೆ ಮುಂದಿನ ವರ್ಷಗಳಲ್ಲಿ ಸಮಾನತೆ ಬರಬಹುದು. ಅದಕ್ಕಾಗಿ ಈಗ ನಾವು ಯೋಚನೆ ಮಾಡಬೇಕಿದೆ. ಅಹಿಂದಕ್ಕೆ ಪುನರ್ ಜನ್ಮ ನೀಡಿ ಬದಲಾವಣೆ ಹಾದಿ ಹಿಡಿಯಬೇಕಿದೆ ಎಂದು ಮುಖಂಡರಾದ ಡಾ.ಭೀಮಣ್ಣ ಮೇಟಿ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಅಹಿಂದ ಸಭೆ ಉದ್ದೇಶಿಸಿ ಮಾತನಾಡಿ ಅವರು, ಅಹಿಂದ ಎಂಬುದು ಒಂದು ಪಕ್ಷವಲ್ಲ ಸಂಘಟನೆ ಶಕ್ತಿಯಾಗಿದೆ. ನಾವೆಲ್ಲರೂ ಅಲ್ಪಸಂಖ್ಯಾತ ಹಿಂದುಳಿದ ವರ್ಗ ದಲಿತರು ಸಂಘಟನೆ ಮಾಡಿ, ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮಲ್ಲಿ ಬರಬೇಕು. ಬಹುಸಂಖ್ಯಾತರಾಗಿದ್ದರೂ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಂಘಟನೆಯಲ್ಲಿ ಹಿಂದುಳಿದಿರುವ ಅಹಿಂದ ವರ್ಗವನ್ನು ಮೇಲೆತ್ತುವುದು ಅಹಿಂದ ಚಳುವಳಿಯ ಆಶಯವಾಗಿದೆ. ಆರ್ಥಿಕ ಹಾಗೂ ರಾಜಕೀಯ ಶಕ್ತಿಯ ಅಗತ್ಯವಿದ್ದು, ಅದಕ್ಕಾಗಿ ಸಂಘಟನೆ ಆಗಬೇಕು ಎಂದರು.
ಜಿಲ್ಲಾ ಅಹಿಂದ ಘಟಕದ ಅಧ್ಯಕ್ಷ ಹನುಮಗೌಡ ಎಸ್ ಮರಕಲ್ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು, ಬಳಿಕ ಮಾತನಾಡಿ ಅಹಿಂದ ವರ್ಗಗಳು ಒಂದಾಗಬೇಕು. ಆಗ ಶಾಶ್ವತವಾಗಿ ಅಧಿಕಾರ ಪಡೆಯಬಹುದು. ಆ ಮೂಲಕ ಅಲ್ಪಸಂಖ್ಯಾತರು , ಹಿಂದುಳಿದವರು ಹಾಗೂ ದಲಿತರಿಗೆ ಧ್ವನಿ ಆಗಿ ನಿಲ್ಲಬೇಕಿದೆ. ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸೋಣ. ಅಲ್ಲಿಂದ ಬಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿ ಅಹಿಂದ ಮರು ಸ್ಥಾಪನೆ ಮಾಡೋಣ ಎಂದರು. ಇದನ್ನೂ ಓದಿ: ಬಣ, ಗುಂಪುಗಾರಿಕೆ ರಾಜಕೀಯ ನನ್ನ ರಕ್ತದಲ್ಲೇ ಇಲ್ಲ
ಬಳಿಕ ತಾಲೂಕ ಅಹಿಂದ ಅಧ್ಯಕ್ಷರಾಗಿ ಶೇಖರ ದೊರೆ ಕಕ್ಕಸಗೇರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಖಾಲೀದ್, ಯಲ್ಲಪ್ಪ ನರಿ, ಶಿವುಪುತ್ರ ಜವಳಿ, ದೇವಿಂದ್ರಪ್ಪ ನಾಶಿ, ಸೈಯದ್ದುದ್ದೀನ್ ಖಾದ್ರಿ, ಸೈಯದ್ ಜಾಫರ್ ಕಾಲರ್ ಸಾಬ್, ಶರಬಣ್ಣ ರಸ್ತಾಪುರ, ನಾಗಣ್ಣ ಬಡಿಗೇರ, ರಂಗಣ್ಣ ದೊರೆ, ಬಸಣ್ಣ ಕೊಳ್ಳುರ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಪ್ರಗತಿಪರ ಚಿಂತಕರು ಇದ್ದರು.
