ಬೆಂಗಳೂರು: ಅಕ್ರಮ ನೀರು ಸೋರಿಕೆಗೆ ಕಡಿವಾಣ ಹಾಕುವ ಮೂಲಕ, ಕಲುಷಿತ ನೀರು ಪತ್ತೆ ಹಚ್ಚಿ ಪರಿಶುದ್ಧ ನೀರು ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲ ಮಂಡಳಿ ಅಳವಡಿಸಿಕೊಂಡಿರುವ ನೂತನ ರೋಬೋಟಿಕ್ ತಂತ್ರಜ್ಞಾನ ದೇಶಕ್ಕೆ ಮಾದರಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಂಸಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂ ಎಸ್ಎಸ್ ಬಿ) ಅಕ್ರಮ ಸಂಪರ್ಕ ಪತ್ತೆ ಮತ್ತು ನೀರಿನ ಸೋರಿಕೆ ತಡೆಗೆ ನೂತನವಾಗಿ ರಚಿಸಿರುವ “ನೀಲಿ ಪಡೆ ಮತ್ತು ರೊಬ್ಯಾಟಿಕ್ ತಂತ್ರಜ್ಞಾನ ಅಳವಡಿಕೆ ಯೋಜನೆಗಳಿಗೆ ಬುಧವಾರ ಅಲಿ ಆಸ್ಕರ್ ರಸ್ತೆಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದ ಅವರು, ಬೆಂಗಳೂರಿನ ಜನರಿಗೆ ಪರಿಶುದ್ಧ ನೀರು ನೀಡುವ ಜವಾಬ್ದಾರಿ ಸರಕಾರದ ಮೇಲಿದೆ. ಇದಕ್ಕಾಗಿ ಮಂಡಳಿಯು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ಬಿಐಎಸ್ ಮಾನ್ಯತೆ ಪಡೆದಿರುವ ಏಕೈಕ ಸಂಸ್ಥೆಯಾಗಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದರು.
ಅಕ್ರಮವಾಗಿ ನೀರಿನ ಸಂಪರ್ಕ ಪಡೆದಿರುವ ಎಲ್ಲರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಬಡವ, ಶ್ರೀಮಂತ, ಉದ್ಯಮಿ ಯಾರೇ ಇರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಎಲ್ಲರಿಗೂ ತಿಳಿಯಬೇಕು. ಮಂಡಳಿ ನೀರಿನ ಜತೆಗೆ ಕೊಳಚೆ ನೀರು ಸೇರುವುದು ಪತ್ತೆ ಹಚ್ಚಿ ಅದನ್ನ ಕ್ಷಿಪ್ರವಾಗಿ ಸರಿಪಡಿಸಬೇಕು. ಬೆಂಗಳೂರಿನ ಜನರು ನೀರಿನ ಕ್ಯಾನ್ ಗಳ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸಿ ಎಂದು ಮಂಡಳಿಗೆ ಸಲಹೆ ನೀಡಿದರು.
ಭಾರತದಲ್ಲೇ ಇದೊಂದು ನೂತನ ಪ್ರಯೋಗ. ರೋಬೋಟಿಕ್ ತಂತ್ರಜ್ಞಾನ ದ ಮೂಲಕ ಅಕ್ರಮ ಸಂಪರ್ಕ ತಡೆಗಟ್ಟಲು ಇದೊಂದು ಉತ್ತಮ ಕ್ರಮ. ನೀರು ಕಲುಷಿತಗೊಂಡ ಸಮಯದಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳದೆ, ನೇರವಾಗಿ ರೋಬೋಟಿಕ್ ತಂತ್ರಜ್ಞಾನ ಮೂಲಕವೇ ಮೂಲವನ್ನು ಪತ್ತೆ ಮಾಡಿ ಹೆಚ್ಚು ರಸ್ತೆ ಅಗೆತಕ್ಕೆ ಅವಕಾಶ ಕಲ್ಪಿಸದೆ, ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಲಿದೆ. ನಾಗರಿಕರಿಗೆ ಅನುಕೂಲವಾಗಬೇಕು ಎಂದು ಈ ರೀತಿ ಮಂಡಳಿ ಈ ಯೋಜನೆ ರೂಪಿಸಿದೆ. ಇದಕ್ಕಾಗಿ ಮಂಡಳಿ ಸಿಬ್ಬಂದಿ , ನೀಲಿ ಪಡೆಗೆ ಅಭಿನಂದನೆ. ಇದು ದೇಶಕ್ಕೆ ಮಾದರಿಯಾಗಲಿ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಅನವಶ್ಯಕವಾಗಿ ರಸ್ತೆ ಅಗೆತಗಳನ್ನು ತಡೆಗಟ್ಟುವ ಅಗತ್ಯತೆ ಹೆಚ್ಚಾಗಿದೆ. ಆ ಮೂಲಕ ರಸ್ತೆ ಗುಂಡಿಯಾಗುವುದನ್ನು ನಿಯಂತ್ರಿಸಬಹುದು. ಈ ರೋಬೋಟಿಕ್ ತಂತ್ರಜ್ಞಾನ ಮಂಡಳಿಗೆ ಬಹಳಷ್ಟು ಉಪಯೋಗವಾಗಲಿದೆ. ಇದನ್ನು ಕೇಂದ್ರ ಸರ್ಕಾರ ಕೂಡ ಒಪ್ಪಿಕೊಂಡಿರುವುದು ಖುಷಿಯ ವಿಚಾರ. ಮಂಡಳಿಯು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ನಾಗರಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
